ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಅಕ್ರಮ: ತನಿಖೆ ನಡೆಸಿ

ಸಾಮಾನ್ಯ ಸಭೆಯಲ್ಲಿ ತಾ.ಪಂ ಅಧ್ಯಕ್ಷ ಆಂಜಿನಪ್ಪ ಸೂಚನೆ
Last Updated 12 ಜನವರಿ 2021, 14:30 IST
ಅಕ್ಷರ ಗಾತ್ರ

ಕೋಲಾರ: ‘ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಸಂಬಂಧ ಶೀಘ್ರವೇ ಸಮಗ್ರ ತನಿಖೆ ನಡೆಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಅಂಗನವಾಡಿಗಳಲ್ಲಿನ ಅಕ್ರಮದ ಸಂಬಂಧ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ಬೇಡ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ನರೇಗಾ ಅನುದಾನದಲ್ಲಿ ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌ ಕಾರಣಕ್ಕೆ ಸರ್ಕಾರಿ ಶಾಲೆಗಳ ಆರಂಭ ತಡವಾಗಿದೆ. ಸರ್ಕಾರ ವಿದ್ಯಾಗಮ ಜಾರಿಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಯವರು ಸಮನ್ವಯದಿಂದ ವಿದ್ಯಾಗಮ ಯಶಸ್ವಿಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಶಾಲೆಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಿ ಶುದ್ಧಗೊಳಿಸಬೇಕು. ತರಗತಿಯಗಳಲ್ಲಿ ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮೇಜುಗಳ ವ್ಯವಸ್ಥೆ ಮಾಡಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದರು.

‘ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಾಗಿ ಬೆಳೆ ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕ್ವಿಂಟಾಲ್‌ಗೆ ₹ 2,500 ಇದೆ. ರಾಗಿಯನ್ನು ಬೆಂಬಲ ಬೆಲೆಗೆ ಖರೀದಿಸುವಲ್ಲಿ ರೈತರಿಗೆ ಯಾವುದೇ ಸಮಸ್ಯೆ ಆಗಬಾರದು’ ಎಂದು ತಿಳಿಸಿದರು.

ಕೋಮ ಸ್ಥಿತಿ: ‘ತಾ.ಪಂ ಅಧ್ಯಕ್ಷರು ಸಮರ್ಥವಾಗಿ ಆಡಳಿತ ನಡೆಸುತ್ತಿಲ್ಲ. ತಾ.ಪಂ ಆಡಳಿತ ವ್ಯವಸ್ಥೆ ಕೋಮ ಸ್ಥಿತಿಯಲ್ಲಿದೆ. ಅಧ್ಯಕ್ಷರ ಅದಕ್ಷ ಆಡಳಿತದಿಂದ ಬೇಸತ್ತಿದ್ದು, ವೇದಿಕೆಯಲ್ಲಿ ಕೂರದೆ ಸಾಮಾನ್ಯ ಸದಸ್ಯರ ಜತೆ ಕೂರುತ್ತೇನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್ ವೇದಿಕೆಯಿಂದ ಕೆಳಗಿಳಿದು ಸದಸ್ಯರ ಸಾಲಿನ ಕುರ್ಚಿಯಲ್ಲಿ ಕುಳಿತರು.

ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷ ಆಂಜಿನಪ್ಪ, ‘ತಾ.ಪಂ ಆಡಳಿತ ಹೇಗೆ ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ರಾಜಕೀಯ ದುರುದ್ದೇಶಕ್ಕೆ ಸುಳ್ಳು ಆರೋಪ ಮಾಡಬೇಡಿ. ನಿಮ್ಮ ವಿಚಾರ ಜನರಿಗೆ ಹಾಗೂ ಸಭೆಯಲ್ಲಿ ಕುಳಿತಿರುವವರಿಗೆ ಗೊತ್ತಿದೆ. ಬಾಯಿಗೆ ಬಂದಂತೆ ಮಾತಾಡಬೇಡಿ’ ಎಂದು ತಿರುಗೇಟು ನೀಡಿದರು.

ಹಣ ಗುಳುಂ: ‘ತಾಲ್ಲೂಕಿನ ಹೋಳೂರಿನಿಂದ ಗಟ್ಟಹಳ್ಳಿಗೆ ಹೋಗುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಪಡಿಸಲು ಸರ್ಕಾರ ₹ 1.20 ಲಕ್ಷ ಮಂಜೂರು ಮಾಡಿದೆ. ಆದರೆ, ಗುತ್ತಿಗೆದಾರರು ರಸ್ತೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ಮಾಡದೆ ಹಣ ಗುಳುಂ ಮಾಡಿದ್ದಾರೆ’ ಎಂದು ಸದಸ್ಯ ಗೋಪಾಲಗೌಡ ಆರೋಪಿಸಿದರು.

ಆಗ ಎಂಜಿನಿಯರ್ ಮತ್ತು ಗೋಪಾಲಗೌಡ ನಡುವೆ ವಾಗ್ವಾದ ನಡೆಯಿತು. ಗೋಪಾಲಗೌಡರು ಎಂಜಿನಿಯರ್‌ಗೆ ಏಕವಚನದಲ್ಲಿ ನಿಂದಿಸಿದರು. ಆಗ ಮಧ್ಯಪ್ರವೇಶಿಸಿದ ಆಂಜಿನಪ್ಪ, ‘ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ. ಅವರು ತಪ್ಪು ಮಾಡಿದ್ದರೆ ಚರ್ಚಿಸಿ ಶಿಸ್ತುಕ್ರಮ ಕೈಗೊಳ್ಳಬಹುದು’ ಎಂದರು.

ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಗೋಪಾಲಗೌಡ, ‘ತಾ.ಪಂ ಅಧ್ಯಕ್ಷರು ಸದಸ್ಯರ ಧ್ವನಿಯಾಗಿ ನಿಲ್ಲಬೇಕು. ಅಭಿವೃದ್ಧಿ ವಿಚಾರದಲ್ಲಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಆದರೆ, ಅಧ್ಯಕ್ಷರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಧ್ಯಕ್ಷರು ಇದೇ ವರ್ತನೆ ಮುಂದುವರಿಸಿದರೆ ಸಭೆಯಿಂದ ಹೊರ ಹೋಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷರು, ‘5 ವರ್ಷದಿಂದಲೂ ಅಧ್ಯಕ್ಷರ ವರ್ತನೆ ಹಿಡಿಸುತ್ತಿಲ್ಲ. ಅವರು ಸದಸ್ಯರ ಮಾತಿಗೆ ಬೆಲೆ ಕೊಡುತ್ತಿಲ್ಲ’ ಎಂದು ಟೀಕಿಸಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರು, ಕಾರ್ಯ ನಿರ್ವಹಣಾಧಿಕಾರಿ ಬಾಬು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT