ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ಕ್ಕೆ ನೌಕರರ ಸಂಘದ ವಾರ್ಷಿಕ ಸಭೆ

Last Updated 2 ಡಿಸೆಂಬರ್ 2021, 14:55 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.26ರಂದು ಸಂಘದ ಸರ್ವ ಸದಸ್ಯರ ಸಭೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

ಇಲ್ಲಿ ಗುರುವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿ, ‘ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ನೌಕರರನ್ನು ಸಭೆಯಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ನೌಕರರ ರಕ್ಷಣೆ ವಿಷಯದಲ್ಲಿ ಹೆಜ್ಜೆ ಹಿಂದಿಡುವ ಪ್ರಶ್ನೆಯಿಲ್ಲ. ತೊಂದರೆಗೊಳಗಾದ ನೌಕರರು ದೂರು ನೀಡದಿದ್ದರೆ ಸಂಘ ಏನು ಮಾಡಲು ಸಾಧ್ಯ? ನೌಕರರಿಗೆ ಸಮಸ್ಯೆಯಾದರೆ ಕಡ್ಡಾಯವಾಗಿ ಸಂಘದ ಗಮನಕ್ಕೆ ತಂದು ದೂರು ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಈಗಾಗಲೇ ಡಿಸೆಂಬರ್‌ 3ನೇ ವಾರದಲ್ಲಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ. ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಮುಗಿದ ನಂತರ ಈ ಸಂಬಂಧ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಾಗುತ್ತದೆ’ ಎಂದು ವಿವರಿಸಿದರು.

‘ಜಿಲ್ಲೆಯ ನೌಕರರ ಭವನದ ನವೀಕರಣಕ್ಕೆ ರಾಜ್ಯ ಸಂಘದಿಂದ ₹ 1 ಕೋಟಿ ನೀಡುವುದಾಗಿ ಅಧ್ಯಕ್ಷ ಷಡಕ್ಷರಿ ಅವರು ಭರವಸೆ ಕೊಟ್ಟಿದ್ದಾರೆ. ಮೊದಲ ಕಂತಾಗಿ ₹ 50 ಲಕ್ಷ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕಂಪ್ಯೂಟರ್‌ ಸಾಕ್ಷರತೆ: ‘ರಾಜ್ಯ ಸರ್ಕಾರಿ ನೌಕರರು -2022ರ ಮಾರ್ಚ್‌ ಒಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಪರೀಕ್ಷೆ ಮುಗಿಸದಿರುವ ನೌಕರರಿಗೆ ಸಂಘದಿಂದ ಅಗತ್ಯ ತರಬೇತಿ ನೀಡಲಾಗುತ್ತದೆ. ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ಇಚ್ಛಿಸುವ ನೌಕರರು 9740744054 ಮೊಬೈಲ್‌ ಸಂಖ್ಯೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಶಿವಕುಮಾರ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಅಜಯ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT