ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮನವಿ

ಕೋವಿಡ್‌–19 ದಿಗ್ಬಂಧನ: ಅಗತ್ಯ ವಸ್ತುಗಳ ಬೆಲೆ ಏರಿಕೆ
Last Updated 30 ಮಾರ್ಚ್ 2020, 15:28 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ದಿಗ್ಬಂಧನದ ಲಾಭ ಪಡೆದು ಏಕಾಏಕಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿರುವ ವ್ಯಾಪಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಒತ್ತಾಯಿಸಿದರು.

ಇಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ‘ಕೇಂದ್ರ ಸರ್ಕಾರದ ದಿಗ್ಬಂಧನ ಆದೇಶದಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.

‘ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿರುವ ಜಿಲ್ಲೆಯ ಜನಪ್ರತಿನಿಧಿಗಳು ಗ್ರಾಮೀಣ ಭಾಗದ ಜನರನ್ನು ಮರೆತಿದ್ದಾರೆ. ಹಳ್ಳಿಗಳಲ್ಲಿ ದಿನಸಿ ಪದಾರ್ಥಗಳು, ಹಾಲು, ತರಕಾರಿ, ಪೆಟ್ರೋಲ್‌, ಡೀಸೆಲ್‌ ಸಿಗದೆ ಜನ ಪರಿತಪಿಸುವಂತಾಗಿದೆ. ಜನಪ್ರತಿನಿಧಿಗಳಿಗೆ ಗ್ರಾಮೀಣ ಭಾಗದ ಜನರ ಸಂಕಷ್ಟದ ಅರಿವಿಲ್ಲ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ರಸಗೊಬ್ಬರ, ಕೀಟನಾಶಕಗಳು ಸಿಗುತ್ತಿಲ್ಲ. ಇದರಿಂದ ಕೃಷಿ ನಿರ್ವಹಣೆ ಕಷ್ಟವಾಗಿದೆ. ಆಹಾರ ಪದಾರ್ಥ, ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಸಮಯದಲ್ಲಿ ಕೈ ಕಾಲು ಮುಗಿದು ಮತ ಪಡೆದ ಶಾಸಕರು ಇದೀಗ ಹಳ್ಳಿಗಳನ್ನು ಸಂಪೂರ್ಣ ಮರೆತಿದ್ದಾರೆ’ ಎಂದು ಕಿಡಿಕಾರಿದರು.

ತುಟಿ ಬಿಚ್ಚುತ್ತಿಲ್ಲ: ‘ಗ್ರಾಮಗಳಲ್ಲಿ ಜನರು ಕೊರೊನಾ ಸೋಂಕಿಗಿಂತ ಹಸಿವಿನಿಂದ ಸಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ತೀವ್ರ ಸಮಸ್ಯೆಯಾಗಿದೆ. ಪೊಲೀಸರು ತರಕಾರಿ ಸಾಗಣೆ ವಾಹನಗಳನ್ನು ತಡೆದು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸರ ಶೋಷಣೆಗೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುಟಿ ಬಿಚ್ಚುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸರು ಜಿಲ್ಲೆಯ ಜನಪ್ರತಿನಿಧಿಗಳನ್ನು ಹುಡುಕಿಕೊಟ್ಟು ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಅವರ ಕಣ್ಣು ತೆರೆಸಬೇಕು. ಗ್ರಾಮಗಳಿಗೆ ಅಗತ್ಯ ವಸ್ತುಗಳು ಪೂರೈಕೆಯಾಗುವಂತೆ ಮಾಡಬೇಕು. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಬೆಲೆ ಹೆಚ್ಚಿಸುವ ವ್ಯಾಪಾರಿಗಳ ಅಂಗಡಿ ಬಂದ್‌ ಮಾಡಿಸಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ನಾಗೇಶ್, ವಿನೋದ್, ಜಗದೀಶ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT