ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ವಸತಿ ಸೌಲಭ್ಯಕ್ಕೆ ಸಚಿವರಿಗೆ ಮನವಿ

Last Updated 17 ಸೆಪ್ಟೆಂಬರ್ 2021, 16:48 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿನ ವಸತಿತಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರಸಭೆ ಸದಸ್ಯ ಎಸ್‌.ಆರ್‌.ಮುರಳಿಗೌಡ ಅವರು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಿದರು.

‘ಉದ್ಯೋಗ, ಶಿಕ್ಷಣ, ಬಡತನ ಹಾಗೂ ಇತರೆ ಕಾರಣಕ್ಕೆ ಜನರು ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಲಸೆ ಬರುತ್ತಿರುವುದರಿಂದ ಕೋಲಾರ ಜಿಲ್ಲಾ ಕೇಂದ್ರದ ಅತಿ ವೇಗದಲ್ಲಿ ಬೆಳೆಯುತ್ತಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 40ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕೋಲಾರದಲ್ಲಿ ಜನರಿಗೆ ವಸತಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ’ ಎಂದು ಮುರಳಿಗೌಡ ಸಚಿವರಿಗೆ ತಿಳಿಸಿದರು.

‘ವಸತಿರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಜಮೀನಿನ ಅಲಭ್ಯತೆ, ಆರ್ಥಿಕ ಸಂಪನ್ಮೂಲ ಕೊರತೆಯ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ವಸತಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಜಮೀನಿನ ಕೊರತೆ ಎದುರಾಗಿದೆ. ಸರ್ಕಾರದ ಮಾರ್ಗಸೂಚಿಯಲ್ಲಿ ಜಮೀನು ಖರೀದಿಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಎಕರೆಗೆ ₹ 15 ಲಕ್ಷ, ಪುರಸಭೆ ವ್ಯಾಪ್ತಿಯಲ್ಲಿ ₹ 18 ಲಕ್ಷ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ₹ 22.50 ಲಕ್ಷ ನಿಗದಿಪಡಿಸಲಾಗಿದೆ. ಆದರೆ, ಕೋಲಾರ ನಗರದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಈ ದರಕ್ಕೆ ಜಮೀನು ಸಿಗುತ್ತಿಲ್ಲ’ ಎಂದು ವಿವರಿಸಿದರು.

‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿಗೆ ಯೋಗ್ಯವಾದ ಜಮೀನಿನ ಬೆಲೆ ಎಕರೆಗೆ ಸುಮಾರು ₹ 1 ಕೋಟಿಯಿದೆ. ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 15 ವರ್ಷಗಳ ಹಿಂದೆ ಎಕೆರೆಗೆ ₹ 60 ಲಕ್ಷವಿತ್ತು. ಸರ್ಕಾರದ ಮಾರ್ಗಸೂಚಿ ಬೆಲೆ ಮತ್ತು ಜಮೀನಿನ ಮಾರುಕಟ್ಟೆ ಬೆಲೆಗೆ ವ್ಯತ್ಯಾಸ ಇರುವುದರಿಂದ ವಸತಿ ಯೋಜನೆಗೆ ಜಮೀನು ಖರೀದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟರು.

ಶಾಸಕರ ನಿರ್ಲಕ್ಷ್ಯ: ‘ಸ್ಥಳೀಯ ಶಾಸಕರು ನಗರದ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದು, 15 ವರ್ಷಗಳಿಂದ ಜಿಲ್ಲಾ ಕೇಂದ್ರದಲ್ಲಿ ವಸತಿರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಶಾಸಕರು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ದೂರಿದರು.

‘ಕೋಲಾರ ಸುತ್ತಮುತ್ತಲ 10 ಕಿ.ಮೀ ವ್ಯಾಪ್ತಿಯಲ್ಲಿನ ಜಮೀನಿನ ದರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾರುಕಟ್ಟೆ ಬೆಲೆಗೆ ತಕ್ಕಂತೆ ದರ ನಿಗದಿಪಡಿಸಬೇಕು. ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿ ಸ್ವಂತ ಸೂರಿನಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT