ಶನಿವಾರ, ಮೇ 8, 2021
27 °C

ಅಕ್ರಮ ಮದ್ಯ ಮಾರಾಟ ತಡೆಗೆ ರೈತ ಸಂಘದಿಂದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಗ್ರಾಮಾಂತರ ಪ್ರದೇಶದ ದಿನಸಿ ಅಂಗಡಿ ಹಾಗೂ ಕೆಲ ಮನೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯದ ವಹಿವಾಟಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಎಂದು ಕರ್ನಾಟಕ ರೈತ ಸಂಘ ಸದಸ್ಯರು ಇಲ್ಲಿ ಇತ್ತೀಚೆಗೆ ಅಬಕಾರಿ ಇಲಾಖೆ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಚಂದ್ರಕಲಾ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದೆ’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಗಣೇಶಗೌಡ ದೂರಿದರು.

‘ಅಕ್ರಮ ಮದ್ಯ ವಹಿವಾಟಿನಲ್ಲಿ ಕೆಲ ಇಲಾಖೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಹಣದಾಸೆಗೆ ಈ ಅಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಹಾದಿ ಬೀದಿಯಲ್ಲಿ ಮದ್ಯ ಮಾರಾಟವಾಗುತ್ತಿರುವುದರಿಂದ ಗ್ರಾಮೀಣ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮದ್ಯವ್ಯಸನಿಗಳು ಪಾನಮತ್ತರಾಗಿ ರಸ್ತೆಗಳಲ್ಲಿ ತೋರಾಡುತ್ತಾ ಜನರಿಗೆ ತೊಂದರೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮದ್ಯವ್ಯಸನಿಗಳಿಂದ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ’ ಎಂದು ಆರೋಪಿಸಿದರು.

‘ಅಕ್ರಮ ಮದ್ಯ ಮಾರಾಟದ ಸಂಗತಿಯನ್ನು ಅಬಕಾರಿ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಅಕ್ರಮ ತಡೆಗೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ನಿಯಮಿತವಾಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಕ್ರಮವಾಗಿ ಮದ್ಯ ಮಾರುವ ದಿನಸಿ ಅಂಗಡಿಗಳ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸಂಘದ ಸದಸ್ಯರು ಒತ್ತಾಯಿಸಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಕಾರ್ಯಾಧ್ಯಕ್ಷ ವೆಂಕಟಾಚಲಪತಿ, ಉಪಾಧ್ಯಕ್ಷ ವಿಶ್ವನಾಥ್‌ಗೌಡ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು