ಮಂಗಳವಾರ, ಜನವರಿ 28, 2020
25 °C

ಉದ್ಯಾನ ಕಾಮಗಾರಿ ಆರಂಭಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಟೇಕಲ್‌ ರಸ್ತೆ ಸಮೀಪದ ಮಕ್ಕಳದ ಉದ್ಯಾನದ ಕಾಮಗಾರಿ ಆರಂಭಿಸುವಂತೆ ಮಕ್ಕಳ ಉದ್ಯಾನ ಹಿತರಕ್ಷಣಾ ಸಮಿತಿ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು.

‘ನಗರದ 14ನೇ ವಾರ್ಡ್‌ ವ್ಯಾಪ್ತಿಯ ಮಕ್ಕಳ ಉದ್ಯಾನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೆಲ ಖಾಸಗಿ ವ್ಯಕ್ತಿಗಳು ಉದ್ಯಾನದ ಜಾಗ ಕಬಳಿಸಲು ಸಂಚು ರೂಪಿಸಿದ್ದಾರೆ. ಉದ್ಯಾನದಲ್ಲಿನ ಕೆಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ ಏಳೆಂಟು ತಿಂಗಳಾದರೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ’ ಎಂದು ಸಮಿತಿ ಸದಸ್ಯರು ದೂರಿದರು.

‘ಹಿಂದಿನ ಜಿಲ್ಲಾಧಿಕಾರಿಯು 2017ರಲ್ಲಿ ಮಕ್ಕಳ ಉದ್ಯಾನಕ್ಕಾಗಿ ಜಮೀನು ಮಂಜೂರು ಮಾಡಿದ್ದರು. ಅಲ್ಲದೇ, ಜಮೀನಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ನಗರಸಭೆಗೆ ಹಸ್ತಾಂತರಿಸಿದ್ದರು. ಈ ಜಮೀನು ಈಗಾಗಲೇ ನಗರಸಭೆ ಹೆಸರಿಗೆ ಅಧಿಕೃತವಾಗಿ ನೋಂದಣಿಯಾಗಿದೆ’ ಎಂದು 14ನೇ ವಾರ್ಡ್‌ ಸದಸ್ಯ ಎಸ್‌.ಆರ್‌.ಮುರಳಿಗೌಡ ಹೇಳಿದರು.

‘ಅಮೃತ್ ಯೋಜನೆಯಡಿ ಮಕ್ಕಳ ಉದ್ಯಾನಕ್ಕೆ ₹ 75 ಲಕ್ಷ ಮೀಸಲಿಡಲಾಗಿದೆ. ಉದ್ಯಾನದ ಜಾಗದಲ್ಲಿದ್ದ  ಹಳೆಯ ಕಟ್ಟಡ ತೆರವುಗೊಳಿಸಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ನಗರಸಭೆ ನಿರ್ಲಕ್ಷ್ಯದಿಂದ ಮೈದಾನಕ್ಕೆ ಮೀಸಲಿಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕ ಎದುರಾಗಿದೆ’ ಎಂದರು.

ರಸ್ತೆ ಬಂದ್‌: ‘ಉದ್ಯಾನ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾದರೆ ನಗರದ ಮಕ್ಕಳಿಗೆ, ವಯೋವೃದ್ಧರು ಹಾಗೂ ನಾಗರಿಕರಿಗೆ ಅನುಕೂಲವಾಗುತ್ತದೆ. ಆದರೆ, ನಗರಸಭೆ ಅಧಿಕಾರಿಗಳು ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಬಾಕಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು. ಉದ್ಯಾನದಲ್ಲಿ ಮತ್ಸ್ಯಾಲಯ ಹಾಗೂ ಗ್ರಂಥಾಲಯ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಟೇಕಲ್‌ ರಸ್ತೆ ಬಂದ್‌ ಮಾಡಿ ಹೋರಾಟ ನಡೆಸುತ್ತೇವೆ’ ಎಂದು ಸಮಿತಿ ಸದಸ್ಯರು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು