ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೀದಿ ನಾಯಿ ಹಾವಳಿ ತಡೆಗೆ ಮನವಿ

Last Updated 10 ನವೆಂಬರ್ 2021, 16:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಇಲ್ಲಿ ಬುಧವಾರ ನಗರಸಭೆ ಆಯುಕ್ತ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲಾ ಕೇಂದ್ರದಲ್ಲಿ ಶ್ವಾನ ಸಂತತಿ ಮಿತಿ ಮೀರಿ ಬೆಳೆದಿದ್ದು, ಬೀದಿ ನಾಯಿ ಉಪಟಳವು ನಗರವಾಸಿಗಳ ನಿದ್ದೆಗೆಡಿಸಿದೆ. ದಿನ ಬೆಳಗಾದರೆ ರಸ್ತೆಯಲ್ಲಿ ಠಳಾಯಿಸುವ ಶ್ವಾನಗಳ ಹಿಂಡು ಪಾದಚಾರಿಗಳು, ಬೈಕ್‌ ಸವಾರರು, ಮಕ್ಕಳ ಮೇಲೆ ಎರಗುವುದು ಸಾಮಾನ್ಯವಾಗಿದೆ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ವಿವಿಧೆಡೆ ಬೀದಿ ನಾಯಿಗಳು ಮಕ್ಕಳಿಗೆ ಕಚ್ಚಿದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಹೀಗಾಗಿ ಮಹಿಳೆಯರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವ ಪರಿಸ್ಥಿತಿ ಇದೆ. ನಗರಸಭೆಯು ಶ್ವಾನ ಸಂತತಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದು, ನಗರವಾಸಿಗಳು ಭಯದ ನಡುವೆ ಬದುಕು ಸಾಗಿಸುವಂತಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಸರ್ಕಾರದಿಂದ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಅನುದಾನ ಬಿಡುಗಡೆಯಾಗಿದೆ. ಆದರೆ, ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೀದಿ ನಾಯಿಗಳ ಸಮಸ್ಯೆ ಗಂಭೀರವಾಗಿದೆ’ ಎಂದು ಆರೋಪಿಸಿದರು.

ನಾಯಿ ಗಣತಿ: ‘ಪ್ರತಿ 5 ವರ್ಷಕ್ಕೊಮ್ಮೆ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯು ಪ್ರಾಣಿ ಗಣತಿ ನಡೆಸುತ್ತದೆ. ಅದರಂತೆ ನಾಯಿಗಳನ್ನು ಹಿಡಿದು ಅವುಗಳ ಕಿವಿ ಅಥವಾ ಇನ್ಯಾವುದಾದರೂ ಭಾಗದಲ್ಲಿ ಗುರುತು ಮಾಡುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಬಳಿಕ ಕಿವಿಗೆ ಸಣ್ಣ ರಂಧ್ರ ಕೊರೆದು ಗುರುತು ಮಾಡಲಾಗುತ್ತದೆ. ಆದರೆ, ನಗರದಲ್ಲಿ ನಾಯಿ ಗಣತಿ ಪ್ರಕ್ರಿಯೆ ಹಳಿ ತಪ್ಪಿದೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಬೀದಿ ನಾಯಿಗಳ ಆರ್ಭಟಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕು. ಮನಬಂದಂತೆ ರಸ್ತೆ ಬದಿಯಲ್ಲಿ ಮಾಂಸದ ತ್ಯಾಜ್ಯ ಸುರಿಯುವ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಕಾರ್ಯಾಧ್ಯಕ್ಷ ಹನುಮಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ಸದಸ್ಯರಾದ ನಾಗೇಶ್, ತಿಮ್ಮಣ್ಣ, ಪ್ರಭಾಕರ್, ಮುನಿಯಪ್ಪ, ಶಿವಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT