ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿ ಬಿಡದ ಬದನೆ: ಪರಿಹಾರಕ್ಕೆ ಮನವಿ

Last Updated 11 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಹಲವೆಡೆ ಬದನೆ ಬೆಳೆ ಸಮೃದ್ಧವಾಗಿ ಬೆಳೆದಿದ್ದರೂ ಕಾಯಿ ಬಿಡದೆ ರೈತರಿಗೆ ನಷ್ಟವಾಗಿದ್ದು, ಜಿಲ್ಲಾಡಳಿತ ಬೆಳೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಒತ್ತಾಯಿಸಿದೆ.

‘ರೈತರು ಬರ ಪರಿಸ್ಥಿತಿ ನಡುವೆಯೂ ಬಡ್ಡಿ ಸಾಲ ಮಾಡಿ ಬದನೆ ಬೆಳೆ ಬೆಳೆದಿದ್ದಾರೆ. ಆದರೆ, ಬದನೆ ಗಿಡಗಳು ಕಾಯಿ ಬಿಟ್ಟಿಲ್ಲ. ಬಿತ್ತನ ಬೀಜ ಕಂಪನಿಗಳು ಹಾಗೂ ಮಾರಾಟಗಾರರು ರೈತರಿಗೆ ನಕಲಿ ಬೀಜ ನೀಡಿ ವಂಚಿಸಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

‘ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳು ಹಾದಿ ಬೀದಿಯಲ್ಲಿ ತಲೆ ಎತ್ತಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಮಳಿಗೆಗಳ ಮಾಲೀಕರೊಂದಿಗೆ ಕೈಜೋಡಿಸಿದ್ದಾರೆ. ರೈತರು ಅಂತರ್ಜಲ ನಂಬಿ ಕೃಷಿ ಮಾಡುತ್ತಿದ್ದಾರೆ. ಬರ ಪರಿಸ್ಥಿತಿಗೂ ಎದೆಗುಂದದೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ಕಂಪನಿಗಳು, ಅಂಗಡಿಗಳ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕೋಲಾರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಹಲವು ರೈತರು ಬದನೆಕಾಯಿ ಬೆಳೆದಿದ್ದಾರೆ. ಆದರೆ, ಬದನೆ ಗಿಡಗಳು ಕಾಯಿ ಬಿಟ್ಟಿಲ್ಲ. ಈ ಸಂಬಂಧ ರೈತರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರೈತರ ಜಮೀನುಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ಸೌಜನ್ಯ ಸಹ ಅಧಿಕಾರಿಗಳಿಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

₹ 2 ಲಕ್ಷ ಪರಿಹಾರ: ‘ಜಿಲ್ಲಾಧಿಕಾರಿಯು ಶೆಟ್ಟಿಹಳ್ಳಿಯ ರೈತರ ಜಮೀನುಗಳಲ್ಲಿ ಪರಿಶೀಲನೆ ಮಾಡಬೇಕು. ಬದನೆಕಾಯಿ ಬೆಳೆ ಬಾರದೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ನೀಡಬೇಕು. ಬಿತ್ತನೆ ಬೀಜ ಗುಣಮಟ್ಟದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಕಳಪೆ ಬಿತ್ತನೆ ಬೀಜ ಮಾರುವ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT