ಬುಧವಾರ, ಮಾರ್ಚ್ 22, 2023
19 °C

ವೈದ್ಯರ ಸೇವೆಗೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ‘ಕೊರೊನಾ ವೈರಸ್ ಕಾರಣದಿಂದ ಇಡೀ ವಿಶ್ವವೇ ಕಂಗಾಲಾಗಿರುವ ಸಂದರ್ಭದಲ್ಲಿ ಸೋಂಕಿತರ ಪಾಲಿಗೆ ವೈದ್ಯರು ದೇವರಾಗಿ ಕಾಣುತ್ತಿದ್ದಾರೆ. ಹಾಗಾಗಿ, ಇಡೀ ವೈದ್ಯ ಸಮೂಹಕ್ಕೆ ಸಮಾಜ ಕೃತಜ್ಞರಾಗಿರಬೇಕು’ ಎಂದು ಲಯನ್ಸ್ ಕ್ಲಬ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಗುರುವಾರ ಲಯನ್ಸ್ ಕ್ಲಬ್ ತಾಲ್ಲೂಕು ಘಟಕದಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ದೇಶದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಅವರ ನೆನಪಿನಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದರು. ಅವರ ಗಣನೀಯ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ‘ಭಾರತ ರತ್ನ’ ಪ್ರಶಸ್ತಿ ನೀಡಿದೆ ಎಂದು ತಿಳಿಸಿದರು.

ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದ ಅವರ ನೆನಪಿನಲ್ಲೇ ರಾಷ್ಟ್ರೀಯ ವೈದ್ಯರ ದಿನ ಆಚರಿಸಬೇಕು ಎಂದು ನಿರ್ಧರಿಸಿದ ಕೇಂದ್ರ ಸರ್ಕಾರ 1991ರಲ್ಲಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲು ಕರೆ ಕೊಟ್ಟಿತು ಎಂದು ತಿಳಿಸಿದರು.

ಕೊರೊನಾ ಮಹಾಮಾರಿಯ ಆರ್ಭಟದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಜನತೆ ಕಂಗಾಲಾಗಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಮನೆ ಕುಟುಂಬಗಳಿಂದ ದೂರ ಉಳಿದು ಎಷ್ಟೊ ಸೋಂಕಿತರ ಪ್ರಾಣ ಕಾಪಾಡಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಸಂತ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ಡಿ ಗ್ರೂಪ್ ನೌಕರರು ಸಹ ಕೊರೊನಾ ಸೋಂಕಿತರನ್ನು ಉಳಿಸಲು ತುಂಬಾ ಶ್ರಮಿಸಿದ್ದಾರೆ. ಸೋಂಕಿತರಿಗೆ ಆಮ್ಲಜನಕ ಕೊರತೆ ಉಂಟಾದಾಗ ಡಿ ಗ್ರೂಪ್ ನೌಕರರು ತಮ್ಮ ಹೆಗಲ ಮೇಲೆ ಆಮ್ಲಜನಕ ಸಿಲಿಂಡರ್‌ಗಳನ್ನು ಹೊತ್ತು ತಂದಿದ್ದಾರೆ. ಇಲ್ಲಿನ ವೈದ್ಯರು, ದಾದಿಗಳು ಹಾಗೂ ಸಿಬ್ಬಂದಿ ರಾತ್ರಿಹಗಲು ಎನ್ನದೇ 24 ಗಂಟೆ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಯ ಡಾ.ವಸಂತ್, ಡಾ.ಶ್ರೀನಿವಾಸ್, ಡಾ.ಹರೀಶ್, ಡಾ.ವೆಂಕಟೇಶ್ ಸೇರಿದಂತೆ ವೈದ್ಯರನ್ನು ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿನಾಯಕ ಪ್ರಭು, ತಾಲ್ಲೂಕು ಘಟಕದ ಉಪಾಧ್ಯಕ್ಷ ಆರ್. ಪ್ರಭಾಕರ್, ಕಾರ್ಯದರ್ಶಿ ಎಂ.ಜಿ. ಮಧುಸೂದನ್, ವಕೀಲ ಎಂ.ಕೆ. ಆನಂದ್ ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.