ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ನಗರಸಭೆ ನೂತನ ಕಟ್ಟಡಕ್ಕೆ ಅನುಮೋದನೆ

ತಾಲ್ಲೂಕು ಕಚೇರಿ ಪಕ್ಕ ₹ 10 ಕೋಟಿ ಅಂದಾಜು ವೆಚ್ಚದ ಸುಸಜ್ಜಿತ ಕಟ್ಟಡ
Last Updated 28 ಸೆಪ್ಟೆಂಬರ್ 2021, 14:47 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದ ತಾಲ್ಲೂಕು ಕಚೇರಿ ಪಕ್ಕದಲ್ಲಿ ₹ 10 ಕೋಟಿ ಅಂದಾಜು ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಇಲ್ಲಿ ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಶ್ವೇತಾ.ಆರ್.ಶಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಟ್ಟಡದ ರೂಪುರೇಷೆಗಳ ಸಂಬಂಧ ವಿಸ್ತೃತ ಚರ್ಚೆ ನಡೆಯಿತು. ನೂತನ ಕಟ್ಟಡದಲ್ಲಿ ಬ್ಯಾಂಕ್, ಎಟಿಎಂ, ಕ್ಯಾಂಟೀನ್ ಹಾಗೂ ಗ್ರಂಥಾಲಯ, ಭವಿಷ್ಯದಲ್ಲಿ ನಗರಸಭೆ ಮೇಲ್ದರ್ಜೆಗೆ ಏರುವುದರಿಂದ ನೂರು ಆಸನಗಳ ವ್ಯವಸ್ಥೆಯುಳ್ಳ ದೊಡ್ಡ ಸಭಾಂಗಣ ನಿರ್ಮಿಸುವಂತೆ ಸದಸ್ಯರು ಸಲಹೆ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣ ದೃಷ್ಟಿಯಿಂದ ಆಸ್ತಿ ತೆರಿಗೆ ವಸೂಲಾತಿ ಪ್ರಕ್ರಿಯೆ ಉನ್ನತೀಕರಿಸಬೇಕು. ಬೆಂಗಳೂರಿನ ಸೆಮಿನಲ್ ಸಾಫ್ಟ್‌ವೇರ್ ಪ್ರೈವೇಟ್ ಲಿಮೆಟೆಡ್‌ ಸಂಸ್ಥೆಯಿಂದ ಆಸ್ತಿಗಳ ಸರ್ವೆ ಮಾಡಿಸಿ ಗಣಕೀಕರಣಗೊಳಿಸಬೇಕು. ಜಿಲ್ಲಾ ಕೇಂದ್ರದ ಬೆಸ್ಕಾಂ ರಸ್ತೆ ವೃತ್ತದಲ್ಲಿ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಥವಾ ದಾನಿಗಳ ಹಣಕಾಸು ನೆರವಿನಲ್ಲಿ ಬೆಂಗಳೂರಿನ ಅಶೋಕ ಪಿಲ್ಲರ್ ಮಾದರಿಯಲ್ಲಿ ಕಾರಂಜಿ ಅಭಿವೃದ್ಧಿಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನೋಟಿಸ್‌ ಕೊಡಿ: ‘ಜಿಲ್ಲಾ ಕೇಂದ್ರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಟೆಂಡರ್‌ ಅವಧಿ ಮುಗಿದರೂ ಗುತ್ತಿಗೆದಾರರು ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ನೋಟಿಸ್‌ ಕೊಡಿ’ ಎಂದು ಸದಸ್ಯ ಬಿ.ಎಂ.ಮುಬಾರಕ್‌ ಒತ್ತಾಯಿಸಿದರು.

‘ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದು ಹಲವು ತಿಂಗಳಾಗಿದೆ. ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, ದೂಳಿನ ಆರ್ಭಟ ಹೆಚ್ಚಿದೆ. ಗುಂಡಿಮಯ ರಸ್ತೆಗಳಲ್ಲಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ’ ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ನಾಜಿಯಾ, ಅಂಬರೀಶ್ ಹಾಗೂ ಇತರೆ ಸದಸ್ಯರು ಸಭೆಯಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ‘ಸಾಧ್ಯವಾದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಈ ಸಂಬಂಧ ಗುತ್ತಿಗೆದಾರರಿಗೆ ಸೂಚನೆ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಬಿರುಕು ಬಿಟ್ಟ ಕಟ್ಟೆ: ‘ಕೋಡಿಕಣ್ಣೂರು ಕೆರೆಯ ಕಟ್ಟೆ ಬಿರುಕು ಬಿಟ್ಟಿದ್ದು, ನೀರು ಸೋರಿಕೆಯಾಗಿ ಮನೆಗಳಿಗೆ ಹರಿಯುತ್ತಿದೆ. ಇದರಿಂದ ಕೆರೆಯ ಅಕ್ಕಪಕ್ಕದ ಮನೆಗಳ ಜನರು ಜೀವ ಭಯದಲ್ಲಿ ಬದುಕುವಂತಾಗಿದೆ. ನೀರು ಸೋರಿಕೆ ತಡೆಗೆ ಕೆರೆಯ ಕಟ್ಟೆಗೆ ಹೊಂದಿಕೊಂಡಂತೆ ತಡೆ ಗೋಡೆ ಕಟ್ಟಬೇಕು. ಕೋಲಾರಮ್ಮ ಕೆರೆಯಲ್ಲಿ ಬೆಳೆದಿರುವ ಜೊಂಡು ತೆಗೆಸಿ ಕೆರೆ ಸ್ವಚ್ಛಗೊಳಿಸಬೇಕು’ ಎಂದು ಸದಸ್ಯ ಅಂಬರೀಶ್ ಕೋರಿದರು.

ಕೋಲಾರಮ್ಮ ಕೆರೆ ಕೋಡಿ ಹರಿದಿದ್ದು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಒಟ್ಟಿಗೆ ಬುಧವಾರ ಬಾಗಿನ ಅರ್ಪಿಸಲು ಹಾಗೂ ಕೆಂದಟ್ಟಿ ಬಳಿ ಕಸ ವಿಲೇವಾರಿ ಘಟಕದ ಕಾಂಪೌಂಡ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್‌, ಆಯುಕ್ತ ಪ್ರಸಾದ್ ಹಾಗೂ ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT