ಮಂಗಳವಾರ, ನವೆಂಬರ್ 19, 2019
22 °C

ಆರೋಪಿಗಳ ಬಂಧನ: ಚಿನ್ನಾಭರಣ ಜಪ್ತಿ

Published:
Updated:
Prajavani

ಕೋಲಾರ: ಬೈಕ್ ಕಳವು, ದರೋಡೆ ಹಾಗೂ ಕನ್ನಕಳವು ಪ್ರಕರಣದ 6 ಆರೋಪಿಗಳನ್ನು ಬಂಧಿಸಿರುವ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೈಕ್‌ ವಶಪಡಿಸಿಕೊಂಡಿದ್ದಾರೆ.

ಮಾಲೂರು ರಸ್ತೆಯ ಬೆಟ್ಟಬೆಣಜೇನಹಳ್ಳಿ ಗೇಟ್‌ ಬಳಿ ಸೆ.15ರಂದು ದರೋಡೆಗೆ ಹೊಂಚು ಹಾಕುತ್ತಿದ್ದ 4 ಮಂದಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಇಬ್ಬರು ಸಹಚರರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

‘ಬಂಧಿತರು ಕೋಲಾರ, ಮಾಲೂರು, ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಬೆಂಗಳೂರಿನ ಹಲವೆಡೆ ಅಪರಾಧ ಕೃತ್ಯ ಎಸಗಿದ್ದಾರೆ. ಅಲ್ಲದೇ, ಮಾಲೂರು ಬಳಿ ಮಹಿಳೆಯನ್ನು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದ್ದಾರೆ.

‘ಆರೋಪಿಗಳಿಂದ 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 3 ಬೈಕ್‌ ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ಚಿನ್ನಾಭರಣ ಪಡೆದು ಆಶ್ರಯ ನೀಡಿದ್ದ ಬೆಂಗಳೂರಿನ ಹಳೇ ಗುಡ್ಡದಹಳ್ಳಿಯ ಸುಮಲತಾ ಎಂಬುವರನ್ನೂ ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.

ಕಳ್ಳನ ಬಂಧನ: ಶಂಕರ್‌ ಎಂಬ ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ₹ 5.50 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮುಳಬಾಗಿಲಿನ ಆರೋಪಿಯು ಕೋಲಾರ ನಗರದ 4 ಮನೆಗಳಲ್ಲಿ ಕಳ್ಳತನ ಮಾಡಿದ್ದ. ಅಲ್ಲದೇ, ಮುಳಬಾಗಿಲು, ಬೆಂಗಳೂರಿನ ಕೆ.ಆರ್.ಪುರ ಮತ್ತು ರಾಮಮೂರ್ತಿನಗರ, ಆಂಧ್ರಪ್ರದೇಶದ ವಿವಿಧ ಠಾಣೆಗಳ ವ್ಯಾಪ್ತಿಯ ಮನೆಗಳಲ್ಲಿ ಕಳವು ಮಾಡಿದ್ದ. ಬೆಂಗಳೂರಿನ ಮೈಕೊಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡಿದ್ದ ಆರೋಪದ ಮೇಲೆ ಸಂಜಯ್‌ ಎಂಬಾತನನ್ನು ಕೋಲಾರದ ಗಲ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು ಆರೋಪಿಗಳನ್ನು ಬಂಧಿಸಿರುವ ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಎಸ್.ಆರ್.ಜಗದೀಶ್, ಎಸ್‍ಐ ಪ್ರದೀಪ್, ನಗರ ಠಾಣೆ ಇನ್‌ಸ್ಪೆಕ್ಟರ್‌ ಫಾರೂಕ್‌ ಪಾಷಾ, ಎಸ್‍ಐ ಅಣ್ಣಯ್ಯ ಹಾಗೂ ಇತರೆ ಸಿಬ್ಬಂದಿಗೆ ಪ್ರಶಂಸನಾಪತ್ರ, ನಗರ ಮತ್ತು ಗ್ರಾಮಾಂತರ ಠಾಣೆಗೆ ತಲಾ ₹ 10 ಸಾವಿರ ಬಹುಮಾನ ನೀಡಿ ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)