ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಕಾಯ್ದೆಯಡಿ ಆರೋಪಿಗಳ ಬಂಧಿಸಿ

ಹುಮನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ: ಸರ್ಕಾರಿ ನೌಕರರ ಸಂಘ ಖಂಡನೆ
Last Updated 29 ಜನವರಿ 2022, 14:16 IST
ಅಕ್ಷರ ಗಾತ್ರ

ಕೋಲಾರ: ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ವೆಂಕಟರಾಜು ಅವರಿಗೆ ಮನವಿ ಸಲ್ಲಿಸಿದರು.

‘ಆರೋಪಿಗಳು ಹುಮನಾಬಾದ್ ತಹಶೀಲ್ದಾರ್ ಪ್ರದೀಪ್‍ ಹಿರೇಮಠ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವುದು ಖಂಡನೀಯ. ತಹಶೀಲ್ದಾರ್‌ನ ಮೇಲಿನ ಹಲ್ಲೆ ಪ್ರಕರಣದಿಂದ ಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಯಾಗಿದೆ’ ಎಂದು ಸಂಘದ ಸದಸ್ಯರು ಹೇಳಿದರು.

‘ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರು ಸಭೆ ನಡೆಸುತ್ತಿದ್ದಾಗ ಕೆಲ ವ್ಯಕ್ತಿಗಳು ಏಕಾಏಕಿ ಕಚೇರಿಪ್ರವೇಶಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ಕೃತ್ಯವನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ’ ಎಂದು ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

‘ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ಚಂದ್ರಮೌಳೇಶ್ವರ ಅವರನ್ನು ಕರ್ತವ್ಯದ ಸಮಯದಲ್ಲಿ ಹತ್ಯೆ ಮಾಡಲಾಗಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಹುಮನಾಬಾದ್‌ ತಹಶೀಲ್ದಾರ್‌ ಮೇಲೆ ಹಲ್ಲೆ ನಡೆದಿರುವುದು ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ’ ಎಂದರು.

ಭಯದ ವಾತಾವರಣ: ‘ಜಿಲ್ಲೆಯಲ್ಲೂ ಸರ್ಕಾರಿ ನೌಕರರು ಕೆಲಸವನ್ನು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿಯಿದೆ. ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ ಹಾಗೂ ನೌಕರರ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ಇಂತಹ ಘಟನೆಗಳ ಬಗ್ಗೆ ನೌಕರರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಾಗ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸಂಘದ ಸದಸ್ಯರು ಕೋರಿದರು.

‘ಸರ್ಕಾರಿ ನೌಕರರು ಕಚೇರಿಗಳಲ್ಲಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ಸೃಷ್ಟಿಸಬೇಕು. ಜತೆಗೆ ಸರ್ಕಾರಿ ನೌಕರರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ತಹಶೀಲ್ದಾರ್‌ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಹಲ್ಲೆಗೊಳಗಾದ ತಹಶೀಲ್ದಾರ್‌ಗೆ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ಕೆ.ವಿಜಯ್, ಉಪಾಧ್ಯಕ್ಷರಾದ ಸುಬ್ರಮಣಿ, ಪುರುಷೋತ್ತಮ್, ಎಂ.ನಾಗರಾಜ್, ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ಪ್ರೇಮಾ, ನವೀನಾ, ಹರೀಶ್, ಕಿರಣ್, ವಿ.ಮುರಳಿಮೋಹನ್, ನಾಗಾನಂದ್ ಕೆಂಪರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT