ಮಂಗಳವಾರ, ಮೇ 17, 2022
29 °C

ಅಶೋಕನಗರ ರಸ್ತೆ ಒತ್ತುವರಿ, ತೆರವುಗೊಳಿಸಲು ನಗರಸಭೆ ಅಧ್ಯಕ್ಷರ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಅಶೋಕನಗರ ರಸ್ತೆ ವಿಸ್ತರಣೆಗೆ ಅನಗತ್ಯವಾಗಿ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.

ಬಹುತೇಕ ಎಲ್ಲಾ ಅಂಗಡಿಗಳು ಒತ್ತುವರಿಯನ್ನು ತೆರವು ಮಾಡಿಕೊಟ್ಟು, ರಸ್ತೆ ಪಕ್ಕದ ಚರಂಡಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಇಬ್ಬರು ಮಾತ್ರ ಇನ್ನೂ ಸಹಕಾರ ನೀಡದೆ ಇರುವುದರಿಂದ ಕಾಮಗಾರಿ ಪೂರ್ಣ ಮಾಡಲು ಸಾಧ್ಯವಾಗಿಲ್ಲ. ಶಾಸಕಿ ಎಂ. ರೂಪಕಲಾ ಹಲವಾರು ಬಾರಿ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿದಾರರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಪ್ರಯೋಜನವಾಗಲಿಲ್ಲ. ಕೂಡಲೇ ತೆರವು ಮಾಡಿ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ನಗರಸಭೆಯಿಂದಲೇ ಒತ್ತುವರಿ ತೆರವು ಮಾಡಿಸಲಾಗುವುದು ಎಂದು ಹೇಳಿದರು.

ನಂತರ ನಗರಸಭೆ ಬಸ್‌ ನಿಲ್ದಾಣಕ್ಕೆ ಆಗಮಿಸಿ, ಖಾಸಗಿ ಬಸ್‌ ನಿರ್ವಾಹಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳು, ಕೆಎಸ್ಆರ್‌ಟಿಸಿ ಸಿಬ್ಬಂದಿಯನ್ನು ಭೇಟಿ ಮಾಡಿದರು.

ನಗರಸಭೆ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳನ್ನು ಮೊದಲಿನಿಂದಲೂ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಆದರೆ ಈಚೆಗೆ ಕೆಎಸ್ಆರ್‌ಟಿಸಿ ಬಸ್‌ಗಳು ತಮ್ಮ ನಿಲ್ದಾಣ ಬಿಟ್ಟು, ನಗರಸಭೆ ಬಸ್‌ ನಿಲ್ದಾಣದಲ್ಲಿ ನಿಲ್ಲಿಸುತ್ತಿವೆ. ಬಸ್‌ ನಿಲ್ದಾಣದ ಮುಂಭಾಗದಲ್ಲಿ ಬಸ್‌ಗಳನ್ನು ನಿಲ್ಲಿಸಿಕೊಂಡು ಖಾಸಗಿ ಬಸ್‌ಗಳು ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಸಮಸ್ಯೆಯನ್ನು ನೀಗಿಸಬೇಕು ಎಂದು ಖಾಸಗಿ ಬಸ್‌ ಪ್ರತಿನಿಧಿಗಳು
ಕೋರಿದರು.

ಹುಲ್ಲು ಮಾರ್ಕೆಟ್‌ ಬಳಿ ಒತ್ತುವರಿ ತೆರವುಗೊಳಿಸಿ, ಅಲ್ಲಿ ಕಾರು ಮತ್ತು ದ್ವಿಚಕ್ರವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ನಂತರ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.

‘ಕೆಎಸ್ಆರ್‌ಟಿಸಿ ಬಸ್ ಮತ್ತು ಖಾಸಗಿ ಬಸ್‌ಗಳಿಗೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಬೇಕು. ಅವರು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ನಗರಸಭೆಗೆ ಕಟ್ಟುವ ತೆರಿಗೆಯನ್ನು ಸಹ ಹೆಚ್ಚಿಸಬೇಕು’ ಎಂದು ನಗರಸಭೆ ಸದಸ್ಯ ರಮೇಶ್‌ಕುಮಾರ್ ಸಲಹೆ ಮಾಡಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್‌, ಶಶಿಕುಮಾರ್‌ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.