ಅಜಾತ ಶತ್ರುವಿನ ಗುಣಗಾನ: ಅಗಲಿದ ಚೇತನಕ್ಕೆ ಪುಷ್ಪನಮನ

7

ಅಜಾತ ಶತ್ರುವಿನ ಗುಣಗಾನ: ಅಗಲಿದ ಚೇತನಕ್ಕೆ ಪುಷ್ಪನಮನ

Published:
Updated:
Deccan Herald

ಕೋಲಾರ: ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತದ ಅಭಿವೃದ್ಧಿಯ ಹರಿಕಾರರು’ ಎಂದು ಬಜರಂಗ ದಳ ಜಿಲ್ಲಾ ಘಟಕದ ಸಂಘಟಕ ಬಾಲಾಜಿ ಬಣ್ಣಿಸಿದರು.

ಬಜರಂಗದಳ ಸಂಘಟನೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ಅಜಾತಶತ್ರು ವಾಜಪೇಯಿ ಅವರ ಪ್ರಾಮಾಣಿಕತೆ, ದೇಶಪ್ರೇಮವು ಯುವಕರಿಗೆ ಆದರ್ಶವಾಗಿದೆ. ನೇರ ನಡೆ ನುಡಿಗೆ ಹೆಸರಾಗಿದ್ದ ವಾಜಪೇಯಿ ಮಹಾನ್‌ ರಾಜಕೀಯ ಮುತ್ಸದಿ’ ಎಂದು ಹೇಳಿದರು.

‘ಆರ್ಥಿಕವಾಗಿ ದುರ್ಬಲವಾಗಿದ್ದ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಶ್ರೇಯ ವಾಜಪೇಯಿ ಅವರಿಗೆ ಸಲ್ಲಬೇಕು. ಶತ್ರು ರಾಷ್ಟ್ರ ಪಾಕಿಸ್ತಾನದ ಜತೆ ಬಾಂಧವ್ಯ ಸುಧಾರಣೆಗೆ ಶ್ರಮಿಸಿದ ಅವರ ಸ್ನೇಹಪರತೆ ಅನುಕರಣೀಯ. ಜನಾನುರಾಗಿಯಾಗಿದ್ದ ಅವರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದರು’ ಎಂದು ತಿಳಿಸಿದರು.

ಅಪಾರ ಕಾಳಜಿ: ‘ಕಾರ್ಗಿಲ್ ಯುದ್ಧ ಭೂಮಿಗೆ ಭೇಟಿ ನೀಡಿ ಸೈನಿಕರನ್ನು ಹುರಿದುಂಬಿಸಿದ ವಾಜಪೇಯಿ ದೇಶದ ಭದ್ರತೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪಥ ರಸ್ತೆಗಳಾಗಿಸಿದ ಅವರ ದೂರದೃಷ್ಟಿ ಈಗಿನ ರಾಜಕಾರಣಿಗಳಿಗೆ ಇಲ್ಲ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾದ ಅವರ ನಡೆಯಿಂದ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುವಂತಾಯಿತು’ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಬಾಬು ಸ್ಮರಿಸಿದರು.

‘ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಲ್ಲಿ ವಾಜಪೇಯಿ ನಿರ್ಣಾಯಕ ಪಾತ್ರ ವಹಿಸಿದರು. ಅವರ ಪರಿಶ್ರಮದ ಫಲವಾಗಿ ದೇಶದಲ್ಲಿ ರಾಜಕೀಯವಾಗಿ ಹೊಸ ಗಾಳಿ ಬೀಸಿತು. ಅವರಂತಹ ಅಪರೂಪದ ರಾಜಕಾರಣಿ ಮತ್ತೊಬ್ಬರಿಲ್ಲ’ ಎಂದು ನುಡಿದರು.

ಸಂಘಟನೆ ಸದಸ್ಯರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದರು. ಸದಸ್ಯರಾದ ಆನಂದ್, ಕನಕೇಶ್, ಸುಮನ್, ಭವಾನಿ, ಸುಪ್ರೀತ್, ವಿಶ್ವನಾಥ್, ರಾಜೇಶ್, ಕಾರ್ತಿಕ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !