ಮಂಗಳವಾರ, ಆಗಸ್ಟ್ 3, 2021
28 °C

ಭಾಷಾ ಸಾಮರಸ್ಯ ಹಾಳುಗೆಡವಲು ಯತ್ನ: ಬಾ.ಹಾ. ಶೇಖರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಹಲವಾರು ವರ್ಷಗಳ ಪರಿಶ್ರಮದಿಂದ ಚಿನ್ನದ ಗಣಿ ಪ್ರದೇಶದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗುತ್ತಿದೆ. ಕನ್ನಡ ನಾಡು, ನುಡಿಗೆ ತೊಂದರೆ ಇಲ್ಲದ ಸಮಯದಲ್ಲಿ ನಗರಸಭೆಯ ಕುವೆಂಪು ಬಸ್ ನಿಲ್ದಾಣದಲ್ಲಿ ತಮಿಳಿನಲ್ಲಿ ಬರೆದ ಹೆಸರಿಗೆ ಕಪ್ಪುಬಣ್ಣ ಬಳಿಸಿರುವುದು ದುರದೃಷ್ಟಕರ ಎಂದು ಕನ್ನಡ ಶಕ್ತಿ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಬಾ.ಹಾ. ಶೇಖರಪ್ಪ ಹೇಳಿದ್ದಾರೆ.

ಕನ್ನಡ ಪರ ಹೋರಾಟಗಾರ ಎಂದು ಹೇಳಿಕೊಳ್ಳುವ ವಾಟಾಳ್ ನಾಗರಾಜ್‌ ಕೋಲಾರ ಜಿಲ್ಲೆಯ ಯಾವುದೇ ಕನ್ನಡ ಹೋರಾಟಗಾರರೊಂದಿಗೆ ಮಾತನಾಡದೇ ಏಕಾಏಕಿ ಕೆಜಿಎಫ್‌ಗೆ‌ ಪಡ್ಡೆ ಹುಡುಗರ ಗುಂಪಿನೊಂದಿಗೆ ಬಂದಿದ್ದಾರೆ. ಕುವೆಂಪು ಬಸ್‌ ನಿಲ್ದಾಣದಲ್ಲಿ ಬರೆಸಿದ್ದ ಕುವೆಂಪು ಅವರ ತಮಿಳಿನ ಅಕ್ಷರಗಳಿಗೆ ಮಸಿ ಬಳಿದಿದ್ದಾರೆ ಎಂದು ದೂರಿದ್ದಾರೆ.

ಕನ್ನಡ ಮತ್ತು ತಮಿಳು ಎಂಬ ತಾರತಮ್ಯವಿಲ್ಲದೆ ಕನ್ನಡ ಅಭಿವೃದ್ಧಿಯ ಜೊತೆಗೆ ಬಿಜಿಎಂಎಲ್‌ನ ತಮಿಳು ಭಾಷೆಗಳ ಕುಟುಂಬದವರೇ ಇಲ್ಲಿದ್ದಾರೆ. ಈ ಪ್ರದೇಶದಲ್ಲಿ ‌ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇತ್ತೀಚೆಗೆ ಬೆಮೆಲ್ ತಮಿಳು ಮಂಡ್ರಂ ಮೊಟ್ಟ ಮೊದಲಿಗೆ ರಾಜ್ಯೋತ್ಸವ ಆಚರಿಸುವ ಮೂಲಕ ಅನ್ಯೋನ್ಯತೆ ಮತ್ತು ಸಾಮರಸ್ಯ ಸಾರಿದೆ. ಇಂತಹ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಇಂದಿನವರೆಗೂ ಜಿಲ್ಲೆಯಲ್ಲಿ ಕನ್ನಡ ಉಳಿಸಿ ಹೋರಾಟಕ್ಕೆ ಬೆಂಬಲಕ್ಕೆ ಬರದೇ ಈಗ ಭಾಷಾ ಸಾಮರಸ್ಯ ಕದಡಲು ಬಂದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಬಸ್ ನಿಲ್ದಾಣದ ನಾಮಫಲಕದಲ್ಲಿ‌ ಶೇಕಡ ಐವತ್ತು ಭಾಗದಲ್ಲಿ ಕನ್ನಡ, ಆ ನಂತರ ಆಂಗ್ಲ ಭಾಷೆ, ಬಳಿಕ ತಮಿಳನ್ನು ಬರೆಸಲು ಕನ್ನಡ ಪರ ಹೋರಾಟಗಾರರು, ನಗರಸಭೆ ಅಧ್ಯಕ್ಷರು‌ ಹಾಗೂ ‌ತಮಿಳು ಸಂಘದವರು ಸೇರಿ ಪೊಲೀಸ್ ‌ವರಿಷ್ಠಾಧಿಕಾರಿ ಅವರ ಸಮ್ಮುಖದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ
ಎಂದಿದ್ದಾರೆ.

ಇತರೇ ನೆರೆಯ ರಾಜ್ಯಗಳ ಗಡಿಯಲ್ಲಿ ಕೂಡ ಕನ್ನಡ ಬಳಸುತ್ತಿರುವುದನ್ನು ವಾಟಾಳ್‌ ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಯಾವುದೇ ಭಾಷಾ ಗೊಂದಲವಿಲ್ಲದ ಚಿನ್ನದ ಭೂಮಿ ಜನರ ನೆಮ್ಮದಿ ಹಾಳುಗೆಡವಿದ ವಾಟಾಳ್ ನಾಗರಾಜ್ ವಿರುದ್ಧ ಕೆಜಿಎಫ್ ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾಟಾಳ್‌ ನಾಗರಾಜ್‌ಗೆ ಇನ್ನು ಮುಂದೆ ಕೆಜಿಎಫ್‌ಗೆ ಇಲ್ಲಿನ ಜನತೆಯ ಅನುಮತಿ ಇಲ್ಲದೆ ಪ್ರವೇಶ ಅಸಾಧ್ಯ. ಅವರು ಹೋರಾಟವನ್ನು ಕಾಸರಗೋಡು ಮತ್ತು ಬೆಳಗಾವಿ‌ ಗಡಿಭಾಗದಲ್ಲಿ ನಡೆಸಲಿ. ಕೋಲಾರ ಜಿಲ್ಲೆಗೆ ಅವರ‌ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು