ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕ ಪರಿಶೋಧನೆ: ಡಿಸಿಸಿ ಬ್ಯಾಂಕ್‌ ಪ್ರಥಮ

ಬದ್ಧತೆಯಿಂದ ಕೆಲಸ ಮಾಡಿ: ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಸೂಚನೆ
Last Updated 10 ಆಗಸ್ಟ್ 2019, 14:16 IST
ಅಕ್ಷರ ಗಾತ್ರ

ಕೋಲಾರ: ‘ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕ್‌ ಶೇ 89.5ರಷ್ಟು ಅಂಕ ಗಳಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಶೇ 100ರ ಅಂಕ ಸಾಧನೆಗೆ ಬದ್ಧತೆಯಿಂದ ಕೆಲಸ ಮಾಡಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಸಿಬ್ಬಂದಿಗೆ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ಡಿಸಿಸಿ ಬ್ಯಾಂಕ್‌ನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ‘ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಗುಂಪುಗಾರಿಕೆ, ವೈಯಕ್ತಿಕ ದ್ವೇಷ ಬಿಟ್ಟು ಅನ್ನ ನೀಡುವ ಸಂಸ್ಥೆ ಉಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದು ತಿಳಿಸಿದರು.

‘ಬ್ಯಾಂಕ್‌ಗೆ ಗ್ರಾಹಕರೇ ದೇವರು. ಅವರನ್ನು ಆಕರ್ಷಿಸುವ ಮೂಲಕ ಉಳಿತಾಯ ಖಾತೆ ತೆರೆಸಿ ಠೇವಣಿ ಇಡುವಂತೆ ಮಾಡಿ. ಆಗ ಮಾತ್ರ ಬ್ಯಾಂಕ್‌ ಪ್ರಗತಿಯಾಗುತ್ತದೆ. ಸಿಬ್ಬಂದಿ ಒಂದೇ ಕುಟುಂಬದವರಂತೆ ಸಹಕಾರ ಮನೋಭಾವದಿಂದ ಕೆಲಸ ಮಾಡಿ. ಬ್ಯಾಂಕ್ ಉಳಿದು ಬೆಳೆದರೆ ಮಾತ್ರ ನಾವು ಮತ್ತು ಕುಟುಂಬ ಸದಸ್ಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಸಿಬ್ಬಂದಿಯಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಇದು ಸರಿಯಲ್ಲ. ಬಡವರ ಬಗ್ಗೆ ಕಾಳಜಿ ಇರಬೇಕು’ ಎಂದರು.

‘ಚಿನ್ನಾಭರಣದ ಮೇಲಿನ ಸಾಲದ ಅವಧಿ ಮುಗಿದಿದ್ದರೂ ಕೆಲವರು ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ನಬಾರ್ಡ್ ಚಿನ್ನಾಭರಣದ ಮೇಲಿನ ಬಡ್ಡಿ ದರವನ್ನು ಶೇ 8ಕ್ಕೆ ಏರಿಕೆ ಮಾಡಿದೆ. ಸಾಲ ವಸೂಲಾತಿ ಬಾಕಿಯಿದ್ದರೆ ಅದರ ನಷ್ಟ ಭರಿಸುವವರು ಯಾರು?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಮಾನತು ಮಾಡುತ್ತೇವೆ: ‘ಬ್ಯಾಂಕ್‌ನ ಕೆಲಸ ಬಾಕಿ ಇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತೀರಿ. ನಾವು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಕೆಲಸ ಬಾಕಿಯಿದ್ದರೆ ಅಮಾನತು ಮಾಡುತ್ತೇವೆ’ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಎಚ್ಚರಿಕೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷರು, ‘ಅಮಾನತು ಅಥವಾ ಕೆಲಸದಿಂದ ವಜಾ ಮಾಡುವುದು ಸುಲಭ. ಆದರೆ, ಸಿಬ್ಬಂದಿಯ ಕುಟುಂಬ ನಿರ್ವಹಣೆ ಬಗ್ಗೆ ಚಿಂತಿಸಿ ಮಾನವೀಯತೆ ತೋರುತ್ತಿದ್ದೇವೆ. ಎದುರಿಗೆ ನಿರ್ದಾಕ್ಷಿಣ್ಯವಾಗಿ ಬೈದ ಮಾತ್ರಕ್ಕೆ ಸಿಬ್ಬಂದಿ ಬಗ್ಗೆ ಪ್ರೀತಿ ಇಲ್ಲವೆಂದು ಅರ್ಥವಲ್ಲ’ ಎಂದರು.

ನೋಟಿಸ್ ಜಾರಿ ಮಾಡಿ: ‘ಒಂದು ಶಾಖೆಗೆ ಕೆಟ್ಟ ಹೆಸರು ಬಂದರೆ ಅದು ಇಡೀ ಬ್ಯಾಂಕ್‌ಗೆ ಅನ್ವಯಿಸುತ್ತದೆ. ಸಾಲಕ್ಕೆ ಶಿಫಾರಸ್ಸು ಮಾಡುವಷ್ಟೇ ಜವಾಬ್ದಾರಿ ವಸೂಲಾತಿಯಲ್ಲೂ ಇರಬೇಕು. ಸಾಲ ಬಾಕಿ ಇರಿಸಿಕೊಂಡವರಿಗೆ ಮುಲಾಜಿಲ್ಲದೆ ನೋಟಿಸ್ ಜಾರಿ ಮಾಡಿ’ ಎಂದು ಆದೇಶಿಸಿದರು.

ಬ್ಯಾಂಕ್‌ನ ನಿರ್ದೇಶಕರಾದ ಎಂ.ಎಲ್‌.ಅನಿಲ್‌ಕುಮಾರ್, ದಯಾನಂದ, ಹನುಮಂತರೆಡ್ಡಿ, ಚನ್ನರಾಯಪ್ಪ, ನಾಗಿರೆಡ್ಡಿ, ಮೋಹನ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT