ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ತಪ್ಪಿಸಿ ಜೀವ ಉಳಿಸಿ: ಆರ್‌ಟಿಒ ದೇವೇಂದ್ರಪ್ರಸಾದ್ ಕಿವಿಮಾತು

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಆರ್‌ಟಿಒ ದೇವೇಂದ್ರಪ್ರಸಾದ್ ಕಿವಿಮಾತು
Last Updated 21 ಜನವರಿ 2020, 15:58 IST
ಅಕ್ಷರ ಗಾತ್ರ

ಕೋಲಾರ: ‘ಸಂಚಾರ ನಿಯಮ ಪಾಲಿಸುವ ಮೂಲಕ ಅಪಘಾತ ತಪ್ಪಿಸಿ ಅಮೂಲ್ಯ ಜೀವ ಉಳಿಸಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ದೇವೇಂದ್ರಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳು ದೇಶದ ಭವಿಷ್ಯದ ಪ್ರಜೆಗಳು’ ಎಂದು ಅಭಿಪ್ರಾಯಪಟ್ಟರು.

‘ವೀಲ್ಹಿಂಗ್‌ನಿಂದ ವಾಹನ ಸವಾರರ ಜೀವದ ಜತೆಗೆ ಇತರರ ಜೀವಕ್ಕೂ ಸಂಚಕಾರ ಬರುವ ಸಾಧ್ಯತೆಯಿದೆ. ಇತರರ ಜೀವದ ಜತೆ ಚೆಲ್ಲಾಟ ಬೇಡ. ಜೀವಕ್ಕೆ ಮಾರಕವಾದ ವೀಲ್ಹಿಂಗ್‌ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಬೇಕು. ಜವಾಬ್ದಾರಿ ಅರಿತು ವಾಹನ ಚಾಲನೆ ಮಾಡಿದರೆ ಅಪಘಾತ ಪ್ರಮಾಣ ತಗ್ಗಿಸಬಹುದು’ ಎಂದು ಸಲಹೆ ನೀಡಿದರು.

‘ಅಪಘಾತ ಪ್ರಕರಣಗಳಿಂದ ಆಗುತ್ತಿರುವ ಸಾವು ನೋವು ಯೋಚಿಸಿದರೆ ಭಯವಾಗುತ್ತದೆ. ವ್ಯಕ್ತಿ ಜೀವಂತವಾಗಿದ್ದರೆ ಬೆಳೆದು ದೇಶಕ್ಕೆ ಯಾವ ಕೊಡುಗೆ ನೀಡುತ್ತಾನೋ ಗೊತ್ತಿರುವುದಿಲ್ಲ. ಅಂತಹ ಪ್ರತಿಭೆಯನ್ನು ಎಳೆಯ ವಯಸ್ಸಿನಲ್ಲೇ ಕಮರಿಸಿದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದಲ್ಲಿ ದಿನಕ್ಕೆ ಸುಮಾರು 1.50 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಪಘಾತ ತಡೆಯಬಹುದು. ಅಪಘಾತ ಪ್ರಮಾಣ ತಗ್ಗಿಸಲು ವಿದ್ಯಾರ್ಥಿಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ತಾಳ್ಮೆ ಮುಖ್ಯ: ‘ವಾಹನ ಚಾಲನೆ ಮಾಡುವಾಗ ತಾಳ್ಮೆ ಅತಿ ಮುಖ್ಯ. ಯಾರೋ ಮುಂದೆ ಹೋದರೆಂದು ಅವರನ್ನು ಹಿಂದಿಕ್ಕಲು ಹೋಗಿ ಜೀವ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿವೆ. ಅಪಘಾತ ನಿಯಂತ್ರಿಸುವುದು ಎಲ್ಲರ ಜವಾಬ್ದಾರಿ’ ಎಂದು ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಜಯರಾಮಪ್ಪ ಕಿವಿಮಾತು ಹೇಳಿದರು.

‘ಸರ್ಕಾರವು ಸುಗಮ ಸಂಚಾರಕ್ಕೆ ಹಲವು ಕಾಯಿದೆ ರೂಪಿಸಿದೆ. ಮೋಟಾರು ವಾಹನ ಕಾಯ್ದೆಯ ಅರಿವಿಲ್ಲದವರು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಹಗಲು ಅಪಘಾತಗಳ ಸಂಖ್ಯೆ ಕಡಿಮೆ. ಆದರೆ, ರಾತ್ರಿ ವೇಳೆ ಪಾನಮತ್ತರಾಗಿ ವಾಹನ ಚಾಲನೆ ಮಾಡಿದಾಗ, ನಿದ್ದೆಯ ಮಂಪರಿನಲ್ಲಿ ಬೆಳಗಿನ ಜಾವ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು’ ಎಂದರು.

4.70 ಲಕ್ಷ ಅಪಘಾತ: ‘ದೇಶದಲ್ಲಿ ವರ್ಷಕ್ಕೆ 4.70 ಲಕ್ಷ ರಸ್ತೆ ಅಪಘಾತ ಸಂಭವಿಸುತ್ತಿವೆ. ಅಪಘಾತದಲ್ಲಿ ಅಪಾರ ಜೀವ ಹಾನಿಯಾಗುತ್ತಿದ್ದು, ಅಪಘಾತ ತಡೆಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ’ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಎನ್.ಗೋಪಾಲಕೃಷ್ಣ ವಿವರಿಸಿದರು.

‘ಕೆಲವರು ಮೋಜಿಗಾಗಿ ಅಜಾಗರೂಕತೆಯಿಂದ ಅತಿ ವೇಗವಾಗಿ ವಾಹನ ಚಲಾಯಿಸಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ವರ್ಷಕ್ಕೆ 11 ಸಾವಿರ ಮಂದಿ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಸುಪ್ರೀಂ ಕೋರ್ಟ್ ಅಪಘಾತಗಳಿಂದ ಜೀವ ಹಾನಿ ತಪ್ಪಿಸಲು ನಿರ್ದೇಶನ ನೀಡಿದೆ. ಚಾಲಕರಿಗೆ ತರಬೇತಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರೆ ಅವರ ಪೋಷಕರಿಗೂ ಅದು ತಲುಪುತ್ತದೆ ಎಂಬ ಉದ್ದೇಶದಿಂದ ಸಂಚಾರ ಸುರಕ್ಷತೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಅಪಘಾತಕ್ಕೆ ಆಹ್ವಾನ: ‘ಚಾಲಕರು ಸರಿಯಾದ ಕ್ರಮದಲ್ಲಿ ವಾಹನ ಚಲಾಯಿಸಿದರೆ ರಸ್ತೆ ಸುರಕ್ಷತೆ ಪಾಲಿಸಬಹುದು. ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅಪಘಾತ ತಡೆದು ಜೀವ ರಕ್ಷಿಸುವುದು ರಸ್ತೆ ಸುರಕ್ಷತಾ ಸಪ್ತಾಹದ ಮುಖ್ಯ ಉದ್ದೇಶ. ನ್ಯಾಯಾಂಗದ ಆದೇಶ, ಕಾರ್ಯಾಂಗದ ನಿಯಮಗಳ ಜಾರಿ ಮತ್ತು ಪೊಲೀಸ್ ಇಲಾಖೆ ಕಾನೂನು ಬಿಗಿಗೊಳಿಸಿ ಜನರಿಗೆ ಅರಿವು ಮೂಡಿಸಿದರೆ ಅಪಘಾತ ತಡೆಯಬಹುದು’ ಎಂದರು.

ಸಂಚಾರ ನಿಯಮ ಕುರಿತ ಭಾಷಣ ಸ್ವರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಸ್.ಅನಂತಪದ್ಮನಾಭ್, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ಸಿ.ಎಲ್.ಶ್ರೀನಿವಾಸಲು, ಸುನೀತಾ, ಡಿ.ಚಂದ್ರಶೇಖರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯವಸ್ಥಾಪಕ ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT