ಗುರುವಾರ , ಜೂನ್ 24, 2021
27 °C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಾಗದಲ್ಲಿ ಕೆಆರ್‌ಐಡಿಎಲ್‌ ಕರಾಮತ್ತು

ಕೋಲಾರ: ಮರಗಳಿಗೆ ಕೊಡಲಿ ಪೆಟ್ಟು ; ಅಕ್ರಮ ಸಾಗಣೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

tree

ಕೋಲಾರ: ಜಿಲ್ಲೆಯ ಕೆಜಿಎಫ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೀಲಗಿರಿ ಹಾಗೂ ಬೇವಿನ ಮರಗಳನ್ನು ಕೆಆರ್‌ಐಡಿಎಲ್‌ ಅಧಿಕಾರಿಗಳು ಅಕ್ರಮವಾಗಿ ಕಡಿದು ಸಾಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೆಜಿಎಫ್‌ ತಾಲ್ಲೂಕು ಪಂಚಾಯಿತಿಗೆ ನೂತನ ಕಟ್ಟಡ ನಿರ್ಮಿಸುವ ನೆಪದಲ್ಲಿ ಪೂರ್ವಾನುಮತಿ ಇಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧಿಕಾರಿಗಳು ಮರಗಳನ್ನು ಕಡಿದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆಜಿಎಫ್‌ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಯು ತಾಲ್ಲೂಕು ಪಂಚಾಯಿತಿಗೆ ನೂತನ ಕಟ್ಟಡ ನಿರ್ಮಿಸುವ ಉದ್ದೇಶಕ್ಕೆ ಈ ಜಾಗವನ್ನು ಹಸ್ತಾಂತರಿಸುವಂತೆ ಕೋರಿದ್ದರು. ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದ ಎಚ್‌.ವಿ.ದರ್ಶನ್‌ ಅವರು ಜಾಗದ ಸಂಬಂಧ ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಹಾಗೂ ಕೆಜಿಎಫ್‌ ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದರು.

ಪತ್ರ ವ್ಯವಹಾರ: ಜಾಗ ಹಸ್ತಾಂತರ ಸಂಬಂಧ ಜಿ.ಪಂ ಸಿಇಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ನಿರ್ದೇಶಕರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನಡುವೆ ಪತ್ರ ವ್ಯವಹಾರ ನಡೆದು ಅಂತಿಮ ನಿರ್ಧಾರಕ್ಕೆ ಬರುವ ಮುನ್ನವೇ ಕೆಆರ್‌ಐಡಿಎಲ್‌ ಅಧಿಕಾರಿಗಳು ಜಾಗದಲ್ಲಿನ 4 ವಸತಿಗೃಹಗಳನ್ನು ಅಕ್ರಮವಾಗಿ ನೆಲಸಮ ಮಾಡಿದ್ದರು. ಬಳಿಕ 2019ರ ಡಿಸೆಂಬರ್‌ನಲ್ಲಿ ಆ ಜಾಗದಲ್ಲಿನ 21 ನೀಲಗಿರಿ ಮರ ಮತ್ತು 1 ಬೇವಿನ ಮರವನ್ನು ಕಡಿದು ಸಾಗಿಸಿದ್ದಾರೆ.

ನಿಯಮದ ಪ್ರಕಾರ ವಸತಿಗೃಹಗಳನ್ನು ನೆಲಸಮ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಮರಗಳನ್ನು ಕಡಿಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ಅರಣ್ಯ ಇಲಾಖೆಯಿಂದಲೂ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಕೆಆರ್‌ಐಡಿಎಲ್‌ ಅಧಿಕಾರಿಗಳು ಪೂರ್ವಾನುಮತಿಯೇ ಇಲ್ಲದೆ ಏಕಾಏಕಿ ಮರಗಳನ್ನು ಕಡಿದಿದ್ದಾರೆ.

ಭಾನುವಾರದ ಆಪರೇಷನ್‌: ಮರಗಳನ್ನು ಕಡಿಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಯಿಂದ ಹಾಗೂ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಬಹುದೆಂಬ ಕಾರಣಕ್ಕೆ ಕೆಆರ್‌ಐಡಿಎಲ್‌ ಅಧಿಕಾರಿಗಳು ಸರ್ಕಾರಿ ರಜಾ ದಿನವಾಗಿದ್ದ 2019ರ ಡಿ.8ರ ಭಾನುವಾರದಂದು ನಿಗೂಢ ಕಾರ್ಯಾಚರಣೆ ನಡೆಸಿದ್ದಾರೆ.

ಕೆಆರ್‌ಐಡಿಎಲ್‌ ಅಧಿಕಾರಿಗಳು ಕಡಿದ ಮರಗಳ ಹರಾಜಿಗೆ ಟೆಂಡರ್‌ ನಡೆಸಿಲ್ಲ. ಮತ್ತೊಂದೆಡೆ ಆ ಮರಗಳನ್ನು ಇಲಾಖೆ ವಶಕ್ಕೂ ಒಪ್ಪಿಸಿಲ್ಲ. ಬದಲಿಗೆ ರಾತ್ರೋರಾತ್ರಿ ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಜೇಬು ತುಂಬಿಸಿಕೊಂಡಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ಪಡೆಯಲು ಕೆಆರ್‌ಐಡಿಎಲ್‌ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯ್‌ಕುಮಾರ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ‘ಪ್ರಜಾವಾಣಿ’ಯ ಸಂಪರ್ಕಕ್ಕೆ ಸಿಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು