ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಮಯ ರಸ್ತೆಯಲ್ಲಿ ಸಾವಿನ ಪಯಣ: ಕೋಲಾರದ ಜಿಲ್ಲಾ ಕೇಂದ್ರದ ದುಸ್ಥಿತಿ!

ವರುಣದೇವನ ಪ್ರಕೋಪಕ್ಕೆ ಹಾಳಾದ ರಸ್ತೆಗಳು: ಕೆರೆಯಂತೆ ನಿಂತ ಮಳೆ ನೀರು
Last Updated 18 ಜುಲೈ 2021, 14:37 IST
ಅಕ್ಷರ ಗಾತ್ರ

ಕೋಲಾರ: ರಸ್ತೆಗಳಲ್ಲಿ ಕೆರೆಯಂತೆ ನೀರು... ಹೆಜ್ಜೆ ಇಟ್ಟಲೆಲ್ಲಾ ಗುಂಡಿಗಳು... ಗುಂಡಿಮಯ ರಸ್ತೆಗಳ ಮಧ್ಯೆ ಆಮೆ ಗತಿಯಲ್ಲಿ ಸಾಗುವ ವಾಹನಗಳು... ಇದು ಯಾವುದೊ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ದುಸ್ಥಿತಿ.

ಜಿಲ್ಲಾ ಕೇಂದ್ರದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ರಸ್ತೆಗಳ ಚಿತ್ರಣವೇ ಬದಲಾಗಿದೆ. ವರುಣದೇವನ ಆಟಾಟೋಪಕ್ಕೆ ಬಹುತೇಕ ರಸ್ತೆಗಳು ಹಾಳಾಗಿದ್ದು, ನಗರವಾಸಿಗಳು ಹಾಗೂ ವಾಹನ ಸವಾರರ ಗೋಳು ಹೇಳತೀರದು.

ನಗರವು ಸುಮಾರು 26.56 ಚದರ ಕಿಲೋ ಮೀಟರ್‌ ವಿಸ್ತಾರವಾಗಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಜನಸಂಖ್ಯೆ ಬೆಳೆದಂತೆ ನಗರದ ವ್ಯಾಪ್ತಿಯೂ ದೊಡ್ಡದಾಗುತ್ತಿದೆ. ನಗರದಲ್ಲಿನ 159 ಕಿ.ಮೀ ರಸ್ತೆಯನ್ನು ನಗರಸಭೆ ಹಾಗೂ 10 ಕಿ.ಮೀ ರಸ್ತೆಯನ್ನು ಪಿಡಬ್ಲ್ಯೂಡಿ ನಿರ್ವಹಣೆ ಮಾಡುತ್ತಿದೆ.

ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು, ದೊಡ್ಡ ಗುಂಡಿಗಳಾಗಿವೆ. ಎಂ.ಬಿ.ರಸ್ತೆ, ಡೂಂಲೈಟ್‌ ರಸ್ತೆ, ಅಂತರಗಂಗೆ ಬೆಟ್ಟದ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ ಹಾಗೂ ಬಡಾವಣೆಗಳಲ್ಲಿನ ರಸ್ತೆಗಳು ಗುಂಡಿಮಯವಾಗಿವೆ. ಮಣ್ಣಿನ ರಸ್ತೆಗಳು ಹಾಗೂ ಸಿಮೆಂಟ್‌ ರಸ್ತೆಗಳು ಮತ್ತಷ್ಟು ಹಾಳಾಗಿದ್ದು, ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ಮಣ್ಣಿನ ರಸ್ತೆಗಳಂತೂ ಕೆಸರು ಗದ್ದೆಯಂತಾಗಿವೆ.

ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಈ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು, ಜನಸಾಮಾನ್ಯರಿಗೆ ನಿತ್ಯವೂ ಕೆಸರಿನ ಮಜ್ಜನವಾಗುತ್ತಿದೆ. ಗುಂಡಿಗಳ ನಡುವೆ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಕಂಡುಬರುತ್ತದೆ. ಗುಂಡಿಮಯ ರಸ್ತೆಗಳಿಂದ ನಗರದ ಸೌಂದರ್ಯ ಹಾಳಾಗಿದ್ದು, ರಸ್ತೆಗಳು ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ.

ಆಹಾರ ಕಲುಷಿತ: ರಸ್ತೆ ಅವ್ಯವಸ್ಥೆಯು ವಾಣಿಜ್ಯ ಚಟುವಟಿಕೆಗಳಿಗೆ ಸಮಸ್ಯೆ ತಂದೊಡ್ಡಿದೆ. ಆಟೊ ಚಾಲಕರಿಗೆ ಗುಂಡಿಮಯ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ದೊಡ್ಡ ಸವಾಲಾಗಿದ್ದು, ಹೆಚ್ಚು ಇಂಧನ ವ್ಯಯವಾಗುತ್ತಿದೆ.

ಮಾರುಕಟ್ಟೆ ಹಾಗೂ ವಾಣಿಜ್ಯ ಸ್ಥಳಗಳಲ್ಲಿನ ರಸ್ತೆಗಳ ಅಕ್ಕಪಕ್ಕ ಇರುವ ಹೋಟೆಲ್‌, ಬೇಕರಿ, ಅಂಗಡಿಗಳ ಕೆಲಸಗಾರರು ಹಾಗೂ ವರ್ತಕರಿಗೂ ರಸ್ತೆ ಅವ್ಯವಸ್ಥೆಯಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ಗುಂಡಿಮಯ ರಸ್ತೆಯಿಂದ ಹೋಟೆಲ್‌ ಮತ್ತು ಅಂಗಡಿಗಳಿಗೆ ತೂರಿ ಬರುವ ದೂಳಿನಿಂದ ಆಹಾರ ಪದಾರ್ಥಗಳು, ಸರಕುಗಳು ಕಲುಷಿತವಾಗುತ್ತಿವೆ. ಗ್ರಾಹಕರು ಅರಿವಿಲ್ಲದೆ ಹೋಟೆಲ್‌ಗಳಲ್ಲಿ ದೂಳುಮಯ ಆಹಾರವನ್ನೇ ಸೇವಿಸುತ್ತಿದ್ದಾರೆ. ಕೆಲಸಗಾರರಿಗೆ ದೂಳನ್ನು ಸ್ವಚ್ಛಗೊಳಿಸುವುದೇ ಕೆಲಸವಾಗಿದೆ.

ಜನರ ಅಲೆದಾಟ: ರಸ್ತೆಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಹಲವು ಬಾರಿ ಧರಣಿ ನಡೆಸಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಪರಸ್ಪರರತ್ತ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜನ ಕಚೇರಿಯಿಂದ ಕಚೇರಿಗೆ ಅಲೆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ರಸ್ತೆಗಳ ದುಸ್ಥಿತಿಯಿಂದ ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಬೈಕ್‌ ಸವಾರರ ಲೆಕ್ಕವಿಲ್ಲ. ತುಂತುರು ಮಳೆ ಬಂದರೂ ಗುಂಡಿಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸುತ್ತಿದೆ.

ಅಧಿಕಾರಿಗಳು ಗುಂಡಿ ಹಾಗೂ ರಸ್ತೆಗಳಿಗೆ ತಾತ್ಕಾಲಿಕವಾಗಿ ಮಣ್ಣು ಮತ್ತು ಜಲ್ಲಿ ಪುಡಿ ಸುರಿದು ಕೈತೊಳೆದುಕೊಂಡಿದ್ದಾರೆ. ಆದರೆ, ಮಣ್ಣು ಮತ್ತು ಜಲ್ಲಿ ಪುಡಿಯು ಮಳೆಗೆ ಕೊಚ್ಚಿ ಹೋಗಿ ಸಮಸ್ಯೆ ಮುಂದುವರಿದಿದೆ. ಗುಂಡಿಮಯ ರಸ್ತೆಗಳಲ್ಲಿನ ಪ್ರಯಾಣವು ಸಾವಿನ ಹಾದಿಯ ಪಯಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT