ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಭವನ ನಿವೇಶನಕ್ಕೆ ಪ್ರಸ್ತಾವ ಸಲ್ಲಿಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಹೇಳಿಕೆ
Last Updated 20 ಆಗಸ್ಟ್ 2019, 14:03 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ಬಾಲಭವನ ನಿರ್ಮಿಸಲು ನಿವೇಶನಕ್ಕಾಗಿ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲಭವನ ಸೊಸೈಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳ ರಕ್ಷಣೆಗಾಗಿ ಬಾಲಭವನ ಅಗತ್ಯ. ಬಾಲಭವನ ನಿರ್ಮಾಣಕ್ಕೆ ನಿವೇಶನ ಹುಡುಕುತ್ತಿದ್ದೇವೆ’ ಎಂದರು.

‘ಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದು ಶಿಕ್ಷಕರ ಜವಾಬ್ದಾರಿ. ಅನೇಕ ಮಕ್ಕಳು ಪ್ರತಿಭೆ ಇದ್ದರೂ ಪ್ರದರ್ಶನಕ್ಕೆ ಅವಕಾಶ ಸಿಗದೆ ಹಿಂದುಳಿಯುತ್ತಾರೆ. ಅಂತಹ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸಲು ಇಲಾಖೆ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

‘ಶಾಲೆಗಳಲ್ಲಿ ಮಕ್ಕಳನ್ನು ಪಠ್ಯಕ್ರಮಕ್ಕೆ ಸೀಮಿತಗೊಳಿಸದೆ ಅವರ ಇಚ್ಛೆಗೆ ತಕ್ಕಂತೆ ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಬೇಕು. ಬಾಲಭವನ ಸೊಸೈಟಿ ವತಿಯಿಂದ ಶಾಲಾ ಮಕ್ಕಳು ಮತ್ತು ಅವಕಾಶ ವಂಚಿತ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುವುದು’ ಎಂದು ವಿವರಿಸಿದರು.

ಸ್ಪರ್ಧಿಸುವುದು ಮುಖ್ಯ: ‘ಮಕ್ಕಳು ಕೀಳರಿಮೆ ಬಿಟ್ಟು ಸ್ವರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಸೋಲು–ಗೆಲುವು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಸ್ಪರ್ಧಿಸುವುದು ಮುಖ್ಯ. ಸೋಲನ್ನು ಖುಷಿಯಿಂದಲೇ ಸ್ವೀಕರಿಸಿ ಮುಂದಿನ ಗೆಲುವಿಗೆ ಮೆಟ್ಟಿಲು ಮಾಡಿಕೊಳ್ಳಿ’ ಎಂದು ತ್ಯಾವನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಮಲ್ಲಿಕಾರ್ಜುನಾಚಾರಿ ಕಿವಿಮಾತು ಹೇಳಿದರು.

‘ಮಕ್ಕಳೇ ದೇಶದ ಆಸ್ತಿ. ಸದೃಢ ದೇಶಕ್ಕಾಗಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಕ್ಕಳ ಪಾತ್ರ ನಿರ್ಣಾಯಕವಾಗಿದ್ದ, ಸಮಾಜಕ್ಕಾಗಿ ಕೊಡುಗೆ ನೀಡಿರುವ ಮಹನೀಯರ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಬಹುಮಾನ: ‘ಸ್ಪರ್ಧೆಗಳಲ್ಲಿ ನಿಷ್ಪಕ್ಷಪಾತ ತೀರ್ಪು ನೀಡಲಾಗಿದೆ. ವಿಜೇತ ಮಕ್ಕಳಿಗೆ ಪ್ರಥಮ ಬಹುಮಾನ ₹ 500, ದ್ವಿತೀಯ ಬಹುಮಾನ ₹ 400, ತೃತೀಯ ಬಹುಮಾನ ₹ 300, ನಾಲ್ಕನೇ ಬಹುಮಾನ ₹ 200 ಹಾಗೂ ಪ್ರಮಾಣಪತ್ರ ನೀಡಲಾಗುವುದು. ಜತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಪ್ರಶಂಸನಾ ಪತ್ರ ನೀಡಲಾಗುವುದು’ ಎಂದು ಜಿಲ್ಲಾ ಬಾಲಭವನ ಸೊಸೈಟಿ ವಿಷಯ ನಿರ್ವಾಹಕ ವಿಶ್ವನಾಥ್ ಮಾಹಿತಿ ನೀಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಪದ್ಮನಾಭ್, ಮಂಜುನಾಥ್, ಸುಬ್ರಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಪರಿಂಟೆಂಡೆಂಟ್‌ ಮಂಜುಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT