ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಮಸ್ವಾಮಿ ಒತ್ತಾಯ
Last Updated 21 ಆಗಸ್ಟ್ 2019, 15:42 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು. ಮದ್ಯ ಮುಕ್ತ ಕರ್ನಾಟಕಕ್ಕಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಮಸ್ವಾಮಿ ಹೇಳಿದರು.

ಧರ್ಮಸ್ಥಳ ಜನಜಾಗೃತಿ ವೇದಿಕೆಯು ಇಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಲವರು ಮದ್ಯಪಾನದ ಚಟ ಹೊಂದಿದ್ದರು. ಸರ್ಕಾರಗಳು ಬೊಕ್ಕಸಕ್ಕೆ ಆದಾಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಮದ್ಯ ನಿಷೇಧಕ್ಕೆ ಮುಂದಾಗುತ್ತಿಲ್ಲ’ ಎಂದರು.

‘ಸರ್ಕಾರ ನಡೆಸಲು ಅಬಕಾರಿ ಇಲಾಖೆಯಿಂದ ಬರುವ ಆದಾಯವೇ ಬೇಕಿಲ್ಲ. ಇತರ ಮೂಲಗಳಿಂದ ಆದಾಯ ಸಂಗ್ರಹಿಸಬಹುದು ಎಂಬುದಕ್ಕೆ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರುವ ಗುಜರಾತ್, ಬಿಹಾರ ರಾಜ್ಯಗಳು ಸಾಕ್ಷಿಯಾಗಿವೆ’ ಎಂದು ತಿಳಿಸಿದರು.

‘ಮದ್ಯ ಮುಕ್ತ ಕರ್ನಾಟಕಕ್ಕಾಗಿ ಹಿಂದಿನ ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಒತ್ತಾಯ ಮಾಡಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 42 ಲಕ್ಷ ಸದಸ್ಯರು ಹಾಗೂ 1 ಲಕ್ಷ ಮದ್ಯ ವ್ಯಸನಮುಕ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬೆಂಗಳೂರಿಗೆ ಬಂದರೆ ಸರ್ಕಾರಕ್ಕೆ ಕುಡಿಯುವ ನೀರು ಕೊಡಲು ಸಾಧ್ಯವಾಗದು’ ಎಂದು ಗುಡುಗಿದರು.

‘ರಾಜ್ಯ ಸರ್ಕಾರಗಳು ಮಾಡಬೇಕಾದ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುತ್ತಿದೆ. ರಾಜ್ಯದಲ್ಲಿ 150 ಕೆರೆಗಳ ಹೂಳು ತೆಗೆಯಲಾಗಿದೆ. ಡೇರಿ ಕಟ್ಟಡಕ್ಕೆ ಅನುದಾನ, ಪಿಂಚಣಿ, ವಿದ್ಯಾರ್ಥಿವೇತನ, ಮಹಿಳಾ ಸಂಘಗಳಿಗೆ ₹ 8 ಸಾವಿರ ಕೋಟಿ ಸಾಲ ನೀಡಲಾಗಿದೆ. ಪ್ರೀತಿ, ವಿಶ್ವಾಸದ ಮೂಲಕ ಮದ್ಯ ವ್ಯಸನ ಬಿಡಿಸಬಹುದು ಎಂಬುದನ್ನು ಯೋಜನೆ ಸದಸ್ಯರು ತೋರಿಸಿಕೊಟ್ಟಿದ್ದಾರೆ. 1,378 ಮದ್ಯ ವರ್ಜನ ಶಿಬಿರಗಳಲ್ಲಿ 1.23 ಲಕ್ಷ ಜನರನ್ನು ವ್ಯಸನ ಮುಕ್ತರಾಗಿಸಲಾಗಿದೆ’ ಎಂದು ವಿವರಿಸಿದರು.

ಪ್ರಗತಿಗೆ ಮಾರಕ: ‘ಮದ್ಯ ವ್ಯಸನವು ಪ್ರಗತಿಗೆ ಮಾರಕ. ಅಮಲೆಂಬ ಹಗ್ಗವು ಬದುಕಿನ ದೋಣಿ ಕಟ್ಟಿಹಾಕಿದೆ. ಈ ಹಗ್ಗವನ್ನು ಬಿಚ್ಚಿ ಬದುಕಿನ ದೋಣಿ ಸುಗಮವಾಗಿ ಸಾಗುವಂತೆ ಮಾಡಲು ವ್ಯಸನಿಗಳಿಗೆ ನಾನಾ ಚಟುವಟಿಕೆಗಳ ಮೂಲಕ ಮನಪರಿವರ್ತನೆ ಮಾಡಲು ಯೋಜನೆ ಸದಸ್ಯರು ಶ್ರಮಿಸಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾಹಿತಿ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಯುವಕರು ಹೆಚ್ಚಾಗಿ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿಂದೆ ಯುವಕರು ದೈಹಿಕವಾಗಿ ಸದೃಢರಾಗುತ್ತಿದ್ದರು. ಆದರೆ, ಈಗ ಆರೋಗ್ಯವಂತರಾಗಿ ಕಾಣುತ್ತಿಲ್ಲ. ಒಂದು ಕುಟುಂಬದಲ್ಲಿ ಮದ್ಯ ವ್ಯಸನಿಯಿದ್ದರೆ ಆ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ’ ಎಂದು ಡಿವೈಎಸ್ಪಿ ಚೌಡಪ್ಪ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಿ.ಚಂದ್ರಶೇಖರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಲಕ್ಷ್ಮಣಗೌಡ, ಸದಸ್ಯ ನಂಜುಂಡಪ್ಪ, ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ತಾಲ್ಲೂಕು ಯೋಜನಾಧಿಕಾರಿ ಎಸ್.ಚಂದ್ರಶೇಖರ್, ಮದ್ಯ ವರ್ಜನಾ ಶಿಬಿರದ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಮೇಲ್ವಿಚಾರಕ ಹರೀಶ್, ಶಿಬಿರಾಧಿಕಾರಿ ವಿದ್ಯಾಧರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT