ಶುಕ್ರವಾರ, ನವೆಂಬರ್ 22, 2019
26 °C
ಬೇಡಿಕೆ ಈಡೇರಿಸದಿದ್ದರೆ ಧರಣಿ: ವಾಟಾಳ್‌ ನಾಗರಾಜ್‌ ಎಚ್ಚರಿಕೆ

ಬೆಂಗಳೂರು– ದೆಹಲಿ ರೈಲು ಪುನರಾರಂಭಿಸಿ

Published:
Updated:
Prajavani

ಕೋಲಾರ: ‘ಬೆಂಗಳೂರು–ದೆಹಲಿ ರೈಲು ಸೇವೆಯನ್ನು 15 ದಿನದಲ್ಲಿ ಪುನರಾರಂಭಿಸದಿದ್ದರೆ ರೈಲು ತಡೆದು ಧರಣಿ ನಡೆಸುತ್ತೇವೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಇಲ್ಲಿನ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ‘ನಗರ ರೈಲು ನಿಲ್ದಾಣವನ್ನು ಮಾದರಿಯಾಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ರೈಲ್ವೆ ಸಚಿವಾಲಯ 15 ದಿನದೊಳಗೆ ಭರವಸೆ ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದರು.

‘ಈ ಹಿಂದೆ ಇದ್ದ ಚಿಕ್ಕ ರೈಲು ಐತಿಹಾಸಿಕ ಸ್ಮಾರಕದಂತಿತ್ತು ಮತ್ತು ಸಾಕಷ್ಟು ಜನಪರವಾಗಿತ್ತು. ಆದರೆ, ಈಗ ದೊಡ್ಡ ರೈಲು ಇದ್ದರೂ ಜನರಿಗೆ ಅನುಕೂಲವಾಗುತ್ತಿಲ್ಲ. ಚಿಕ್ಕ ರೈಲಿನಂತೆಯೇ ದೊಡ್ಡ ರೈಲು ಜನರಿಗೆ ಅನುಕೂಲಕರ ಸೇವೆ ನೀಡಬೇಕು. ನಗರ ರೈಲು ನಿಲ್ದಾಣ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ರೈಲ್ವೆ ಸಚಿವಾಲಯ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಹೊರಗಿನವರ ಪಾಲಾಗಿದ್ದು, ಕನ್ನಡಿಗರನ್ನು ವಂಚಿಸಲಾಗಿದೆ. ರಾಜ್ಯ ಸಂಸದರಿಗೆ ಈ ಅನ್ಯಾಯ ಪ್ರಶ್ನಿಸುವ ಯೋಗ್ಯತೆಯಿಲ್ಲ. ರಾಜ್ಯದಲ್ಲೇ ರೈಲ್ವೆ ಮತ್ತು ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆ ನಡೆಯಬೇಕು. ಈ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

‘ಕಾಲಕ್ಕೆ ತಕ್ಕಂತೆ ದೊಡ್ಡ ರೈಲು ಓಡಬೇಕು. ದೆಹಲಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ರಾಜಕಾರಣಿಗಳು ಈ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಇದೆಲ್ಲಾ ಬೇಕಿಲ್ಲ. ರೈಲು ನಿಲ್ದಾಣ ಅಭಿವೃದ್ಧಿಪಡಿಸಲು ಎಷ್ಟು ವರ್ಷ ಬೇಕು? ಸರಿಯಾದ ರೀತಿ ರೈಲು ಓಡುತ್ತಿಲ್ಲ, ಜನರಿಗೆ ಅನುಕೂಲವಾಗುತ್ತಿಲ್ಲ, ನಿಲ್ದಾಣದಲ್ಲಿ ಮೂಲಸೌಕರ್ಯ ಸಮಸ್ಯೆಯಿದೆ’ ಎಂದು ದೂರಿದರು.

ಜೀವನ ನರಕ: ‘ಪೊಲೀಸರ ಜೀವನ ನರಕವಾಗಿದೆ. 15 ದಿನಗಳ ರಜೆಯಲ್ಲಿ 5 ದಿನ ಕಡಿತಗೊಳಿಸಲಾಗಿದೆ. ಈ ಕ್ರಮ ಹಿಂಪಡೆಯಬೇಕು. ರಾಜ್ಯದಲ್ಲಿ ಗೃಹರಕ್ಷಕ ದಳ ಸಿಬ್ಬಂದಿಗೆ ₹ 10 ಸಾವಿರ ವೇತನವಿದೆ. ಆದರೆ, ಆಂಧ್ರಪ್ರದೇಶದಲ್ಲಿ ₹ 23 ಸಾವಿರ ವೇತನ ಕೊಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಗೃಹರಕ್ಷಕ ದಳ ಸಿಬ್ಬಂದಿಯ ವೇತನ ಹೆಚ್ಚಿಸಬೇಕು. ಔರಾದ್ಕರ್ ವರದಿಯಿಂದ ಪೊಲೀಸರಿಗೆ ನೆಮ್ಮದಿ ಸಿಗಲಿದೆ’ ಎಂದರು.

‘ಕೇಂದ್ರ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿದೆ. ದಂಡ ಹೆಚ್ಚಳದ ಕ್ರಮ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಪೊಲೀಸರ ತಡೆ: ರೈಲು ನಿಲ್ದಾಣದ ಒಳ ಹೋಗಲು ಮುಂದಾದ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ತಡೆದರು. ಇದರಿಂದ ಕೋಪಗೊಂಡ ವಾಟಾಳ್ ನಾಗರಾಜ್‌, ‘ತಾಯಿಯಾಣೆ ನಾನು ಚಳವಳಿ ಮಾಡಲ್ಲ. ದಯವಿಟ್ಟು ಅರ್ಥ ಮಾಡಿಕೊಂಡು ಒಳಗೆ ಬಿಡಿ. ನಾನು ಏನೂ ಮಾಡುವುದಿಲ್ಲ’ ಎಂದು ಮನವಿ ಮಾಡಿದರು. ಬಳಿಕ ಪೊಲೀಸರು ನಿಲ್ದಾಣದ ಒಳಗೆ ಅವಕಾಶ ನೀಡಿದರು.

ಪ್ರತಿಕ್ರಿಯಿಸಿ (+)