ಗುರುವಾರ , ಡಿಸೆಂಬರ್ 2, 2021
19 °C
ರ‍್ಯಾಂಕ್‌ ವಿಜೇತ 27 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ನ.27ಕ್ಕೆ ಪ್ರಥಮ ಘಟಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವು ಶನಿವಾರ (ನ.27) ನಡೆಯಲಿದ್ದು, ವಿವಿಧ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿರುವ 27 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕುಮುದಾ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದ ಹೊರವಲಯದ ಮಂಗಸಂದ್ರ ಬಳಿಯಿರುವ ವಿ.ವಿ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕ ಪ್ರದಾನ ಮಾಡುತ್ತಾರೆ’ ಎಂದರು.

‘ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಘಟಿಕೋತ್ಸವದಲ್ಲಿ ಭಾಗವಹಿಸುತ್ತಿಲ್ಲ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಅನಿಲ್ ಡಿ.ಸಹಸ್ರಬುಧಿ ಆನ್‍ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡುತ್ತಾರೆ’ ಎಂದು ವಿವರಿಸಿದರು.

‘ಹಿಂದಿನ ವರ್ಷ ನಡೆಯಬೇಕಿದ್ದ ಘಟಿಕೋತ್ಸವವನ್ನು ಕೋವಿಡ್‌ ಕಾರಣಕ್ಕೆ ಮುಂದೂಡಲಾಗಿತ್ತು. ಇದು ವಿ.ವಿಯ ಮೊದಲ ಘಟಿಕೋತ್ಸವ ಆಗಿರುವುದರಿಂದ ಬೆಂಗಳೂರು ವಿ.ವಿ ಮಾದರಿಯಲ್ಲಿಯೇ ಘಟಿಕೋತ್ಸವ ಕಾರ್ಯಕ್ರಮ ರೂಪಿಸಲಾಗಿದೆ' ಎಂದು ವಿ.ವಿ ಕುಲಸಚಿವ (ಮೌಲ್ಯಮಾಪನ) ಕೆ.ಜನಾರ್ದನಂ ಮಾಹಿತಿ ನೀಡಿದರು.

‘ವಿ.ವಿಯಲ್ಲಿ 31 ಕೋರ್ಸ್‍ಗಳಿದ್ದು, ಅಂತಿಮ ವರ್ಷದ ಸ್ನಾತಕೋತ್ತರ ಪದವಿಯ 25 ಮಂದಿ ಹಾಗೂ ಬಿಇಡಿ ಮತ್ತು ಬಿಪಿಎಡ್‌ನ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ. ಸ್ನಾತಕೋತ್ತರ ವಿಭಾಗದ ಫಲಿತಾಂಶದಲ್ಲಿ ಶೇ 60ರಷ್ಟು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ’ ಎಂದು ಹೇಳಿದರು.

‘ಘಟಿಕೋತ್ಸವದಲ್ಲಿ 2,644 ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 1,118 ವಿದ್ಯಾರ್ಥಿಗಳು ಮತ್ತು 1,526 ವಿದ್ಯಾರ್ಥಿನಿಯರು ಸೇರಿದ್ದಾರೆ. ಚಿನ್ನದ ಪದಕ ಪಡೆದಿರುವವರಲ್ಲಿ 21 ಮಂದಿ ವಿದ್ಯಾರ್ಥಿನಿಯರಿದ್ದಾರೆ’ ಎಂದು ತಿಳಿಸಿದರು.

ವೇತನ ಹೆಚ್ಚಳ: ‘ರಾಜ್ಯದ ಇತರೆ ವಿ.ವಿಗಳ ಮಾದರಿಯಲ್ಲೇ ನಮ್ಮ ವಿ.ವಿಯಲ್ಲೂ ಅತಿಥಿ ಬೋಧಕ ಸಿಬ್ಬಂದಿಗೆ ₹ 51 ಸಾವಿರ ವೇತನ ನೀಡುವ ಪ್ರಸ್ತಾವಕ್ಕೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಪ್ರಸ್ತಾವವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ರಾಜ್ಯಪಾಲರು ಅಂಕಿತ ಹಾಕಿದ ಬಳಿಕ ಸಿಬ್ಬಂದಿಯ ವೇತನ ಹೆಚ್ಚಾಗಲಿದೆ’ ಎಂದು ವಿ.ವಿ ಕುಲಸಚಿವ (ಆಡಳಿತ) ಡಾ.ವಿ.ವೆಂಕಟೇಶಮೂರ್ತಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು