ಬಂಗಾರಪೇಟೆ: ತಾಲ್ಲೂಕಿನ ಜನಸಾಮಾನ್ಯರು ಮತ್ತು ಪಡಿತರ ವ್ಯವಸ್ಥೆಗೆ ಅನ್ನ ನೀಡುವ ಕೇಂದ್ರವಾಗಿ ಕಾರ್ಯ ನಿರ್ವಹಿಸಬೇಕಾದ ಬಂಗಾರಪೇಟೆ ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಗ್ರಾಣವು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ನಗರದ ನ್ಯಾಯಾಲಯದ ಸಂಕೀರ್ಣದ ಮುಂಭಾಗದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಗ್ರಾಣದಲ್ಲಿ ಹಗಲಿರುಳು ಕಷ್ಟಪಟ್ಟು ದುಡಿಯುವ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲ. ಈ ವಿಚಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ ಎಂದು ರೈತರು ಆರೋಪಿಸಿದರು.

ದಿನವಿಡೀ ನೂರಾರು ಕ್ವಿಂಟಲ್ ತೂಕದ ಭಾರಿ ಮೂಟೆಗಳನ್ನು ಬೆನ್ನಿನ ಮೇಲೆ ಹೊತ್ತು ಸಾಗಿಸುವ ಹಮಾಲಿ (ಕೂಲಿ) ಕಾರ್ಮಿಕರಿಗೆ ಕುಡಿಯಲು ಒಂದು ಬೊಗಸೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ದುರದೃಷ್ಟಕರ ಸಂಗತಿ. ಬೇಸಿಗೆ ಅಥವಾ ಮಳೆಗಾಲವೇ ಇರಲಿ, ಮೈಮುರಿದು ದುಡಿಯುವ ಕಾರ್ಮಿಕರು ನೀರಿಗಾಗಿ ಪಕ್ಕದ ಅಂಗಡಿ ಅಥವಾ ಇನ್ಯಾರದ್ದೊ ಮನೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಉಗ್ರಾಣದಲ್ಲಿ ಪುರುಷರು ಮಾತ್ರವಲ್ಲದೆ ಹಲವು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಯ ನಿರ್ವಹಿಸುವ ಮಹಿಳೆಯರು ಮತ್ತು ಪುರುಷರಿಗೆ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಹೀಗಾಗಿ, ಕಾರ್ಮಿಕರು ನಿತ್ಯವೂ ಬಯಲು ಶೌಚವನ್ನೇ ಅವಲಂಬಿಸಿದ್ದು, ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ವಚ್ಛ ಭಾರತದ ಬಗ್ಗೆ ಮಾತನಾಡುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲೇ ಈ ರೀತಿಯ ಶೌಚಾಲಯ ಸ್ಥಿತಿ ಇದೆ ಎಂದು ಕಾರ್ಮಿಕರು ದೂರುತ್ತಾರೆ.

ದೂರದ ಊರುಗಳಿಂದ ತಾಸುಗಟ್ಟಲೇ ಪ್ರಯಾಣ ಮಾಡಿ ಧಾನ್ಯದ ಮೂಟೆಗಳನ್ನು ಹೊತ್ತು ತರುವ ಲಾರಿ ಚಾಲಕರು, ನಿರ್ವಾಹಕರು ಹಾಗೂ ಸ್ಥಳೀಯ ಕಾರ್ಮಿಕರಿಗೆ ಕೆಲಸದ ಬಿಡುವಿನ ವೇಳೆ ಕುಳಿತುಕೊಳ್ಳಲು ಅಥವಾ ವಿಶ್ರಾಂತಿ ಪಡೆಯಲು ಯಾವುದೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲ. ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಕಾರ್ಮಿಕರು, ಲಾರಿ ಚಾಲಕರು ಲಾರಿಗಳ ಕೆಳಗೆ ಅಥವಾ ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತಾರೆ.

ಉಗ್ರಾಣದ ಇಡೀ ಆವರಣವು ಸಂಪೂರ್ಣವಾಗಿ ಗುಂಡಿ ಬಿದ್ದಿದ್ದು, ಸಣ್ಣ ಮಳೆ ಬಂದರೂ ಇಡೀ ಆವರಣವೇ ಕೆಸರು ಗದ್ದೆಯಂತಾಗುತ್ತದೆ. ಭಾರಿ ಪ್ರಮಾಣದ ಧಾನ್ಯ ಹೊತ್ತು ತರುವ ಲಾರಿಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಲಾರಿಗಳು ಕೆಸರಿನಲ್ಲಿ ಸಿಲುಕಿಕೊಂಡು ಕೆಲವೊಮ್ಮೆ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾಗುತ್ತದೆ. ಮೂಟೆಗಳನ್ನು ಹೊತ್ತು ನಡೆಯುವ ಕಾರ್ಮಿಕರು ಜಾರಿ ಬಿದ್ದು ಗಾಯ ಮಾಡಿಕೊಂಡಿರುವ ಪ್ರಸಂಗಗಳು ನಡೆದಿವೆ ಎಂದು ನೊಂದ ಕಾರ್ಮಿಕರು ಹೇಳುತ್ತಾರೆ.

‘ನಮಗೆ ಕುಡಿಯಲು ಒಂದು ಲೋಟ ನೀರು ಕೊಡದ ಸರ್ಕಾರಕ್ಕೆ ನಮ್ಮ ಶಾಪ ತಟ್ಟಲಿದೆ. ಪ್ರತಿನಿತ್ಯವೂ ₹20–₹30 ನೀರಿಗಾಗಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದುಡಿಯುವ ಅಲ್ಪ ಕೂಲಿಯಲ್ಲಿ ನೀರಿಗೆ ಇಷ್ಟು ಖರ್ಚು ಮಾಡಿದರೆ ನಮ್ಮ ಸಂಸಾರ ಸಾಕುವುದು ಹೇಗೆ? ನಮ್ಮ ಶ್ರಮದಿಂದ ನಿಗಮ ನಡೆಯುತ್ತಿದೆ. ಆದರೆ ನಮಗೆ ಸಿಗುತ್ತಿರುವುದು ಕೇವಲ ಕಣ್ಣೀರು’ ಎಂದು ಹಮಾಲಿ ಕಾರ್ಮಿಕರ ಸಂಘದ ಮುಖಂಡ ಕೆ. ವೆಂಕಟೇಶ್ ಹೇಳಿದರು.

ಶೌಚಾಲಯ ವ್ಯವಸ್ಥೆ ಒತ್ತಾಯ

ದಿನವಿಡೀ ತೂಕದ ಮೂಟೆಗಳನ್ನು ಹೊತ್ತು ಮೈಮುರಿದು ದುಡಿಯುವ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ತಕ್ಷಣವೇ ಉಗ್ರಾಣದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬೇಕು. ಮಾನವೀಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಮಹಿಳೆಯರು ಮತ್ತು ಪುರುಷ ಕಾರ್ಮಿಕರಿಗೆ ಪ್ರತ್ಯೇಕ ಹಾಗೂ ಸುಸಜ್ಜಿತ ಶೌಚಾಲಯಗಳನ್ನು ಕಾಲಮಿತಿಯೊಳಗೆ ನಿರ್ಮಿಸಿಕೊಡಬೇಕು ಎಂಬುದು ಕಾರ್ಮಿಕರ ಒತ್ತಾಯ.

ಬಡವರ ಹೊಟ್ಟೆ ತುಂಬಿಸುವ ಅನ್ನದ ಕೇಂದ್ರದಲ್ಲೇ ಭಾರಿ ಪ್ರಮಾಣದ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿತನವಿದೆ. ಕಾರ್ಮಿಕರ ಕಲ್ಯಾಣದ ಬಗ್ಗೆ ಭಾಷಣ ಬಿಗಿಯುವ ನಾಯಕರು, ಈ ಉಗ್ರಾಣದ ಪರಿಸ್ಥಿತಿಯನ್ನು ಒಮ್ಮೆ ಬಂದು ನೋಡಲಿ. ಆಹಾರ ಇಲಾಖೆ ಸಚಿವರು ಮತ್ತು ಶಾಸಕರು ಜಂಟಿ ಪರಿಶೀಲನೆ ನಡೆಸಿ, ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಲಾರಿ ಚಾಲಕ ಅಮರನಾಥ್ ಮನವಿ ಮಾಡಿದರು.

ಅನುದಾನ ಬಿಡುಗಡೆ ಬಳಿಕ ಕಾಮಗಾರಿ

ಉಗ್ರಾಣದಲ್ಲಿ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ, ಆವರಣದಲ್ಲಿ ಸಿಸಿರಸ್ತೆ ನಿರ್ಮಾಣಕ್ಕೆ ಈಗಾಗಲೇ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಅನುಮೋದನೆಗೆ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ಕೈಗೊಳ್ಳುವೆವು

-ಪ್ರಸಾದ್ ರೆಡ್ಡಿ, ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ, ಕೋಲಾರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.