ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಕಾಂಗ್ರೆಸ್‌ಗೆ?

ಬಂಗಾರಪೇಟೆ ಪುರಸಭೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
ಮಂಜುನಾಥ ಎಸ್
Published : 17 ಆಗಸ್ಟ್ 2024, 7:05 IST
Last Updated : 17 ಆಗಸ್ಟ್ 2024, 7:05 IST
ಫಾಲೋ ಮಾಡಿ
Comments

ಬಂಗಾರಪೇಟೆ: ಒಂದೂವರೆ ವರ್ಷದಿಂದ ಖಾಲಿ ಉಳಿದಿರುವ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಕೊನೆಗೂ ಮೀಸಲಾತಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಅಧಿಕಾರದ ಗದ್ದುಗೆ ಏರಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ನಿಗದಿಯಾಗಿದೆ. ಮೀಸಲಾತಿಗೆ ಅನುಗುಣವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಅರ್ಹತೆ ಇರುವವರು ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.

ಪುರಸಭೆಯಲ್ಲಿ ಒಟ್ಟು 27 ಸದಸ್ಯ ಬಲದಲ್ಲಿ ಕಾಂಗ್ರೆಸ್‌ನ 20 ಸದಸ್ಯರಿದ್ದು, ಜೆಡಿಎಸ್‌ನ ಇಬ್ಬರು, ಬಿಜೆಪಿಯ ಒಬ್ಬ ಹಾಗೂ ನಾಲ್ಕು ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರೇ ಆಯ್ಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದಾಗಿದೆ. ಏತನ್ಮಧ್ಯೆ, ಪಕ್ಷೇತರ ಸದಸ್ಯರಾದ ಕಪಾಲಿ ಶಂಕರ್ ಮತ್ತು ಚಂದ್ರಾರೆಡ್ಡಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೂ ಮತದಾನದ ಹಕ್ಕಿದೆ. ಜೆಡಿಎಸ್ ಸದಸ್ಯ ಸುನೀಲ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡ ಪಕ್ಷೇತರ ಸದಸ್ಯ ಕಪಾಲಿ ಶಂಕರ್ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ 14ರ ಮ್ಯಾಜಿಕ್ ನಂಬರ್ ತಲುಪಬೇಕು. ಹೀಗಾಗಿ ಈ ಇಬ್ಬರ ಆಯ್ಕೆಗೆ ಸದಸ್ಯರ ಸಂಖ್ಯಾಬಲದ ಕೊರತೆ ಇದೆ. ಇದರ ನಡುವೆ, ಪುರಸಭೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸದಸ್ಯರಿಗೆ ಮೀಸಲಾತಿ ನಿರಾಸೆ ಮೂಡಿಸಿದೆ. 

ಯಾವುದೇ ಚುನಾವಣೆ ನಡೆದರೂ ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ಸಾಮಾನ್ಯ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಕಂಡುಬರುತ್ತಿಲ್ಲ. ಕೇವಲ ಕಾಂಗ್ರೆಸ್‌ನ ಪಕ್ಷದೇ ಅಧಿಪತ್ಯ ಎಂಬಂತಾಗಿದೆ. 

ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಾಗದ ಕಾರಣ ಒಂದು ವರ್ಷದಿಂದ ಪುರಸಭೆಯಲ್ಲಿ ಸಾರ್ವಜನಿಕರ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಯಾವುದೇ ಕೆಲಸ ಮಾಡಿಕೊಡಲು ಕೇಳಿದರೆ ಅಧ್ಯಕ್ಷ, ಉಪಾಧ್ಯಕ್ಷ ಇಲ್ಲ ಎಂಬ ಸಬೂಬುಗಳನ್ನು ಅಧಿಕಾರಿಗಳು ನೀಡುತ್ತಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಮೀಸಲಾತಿ ನಿಗದಿಯಾಗಿರುವುದರಿಂದ ಮುಂದಾದರೂ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತ್ವರಿತಗತಿಯಲ್ಲಿ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಪಟ್ಟಣದ ಜನರು ಇದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್‌ಗಳು ಹಾಗೂ ಅಕ್ರಮ ಖಾತೆಗಳ ನಿರ್ಮಾಣವಾಗಿದ್ದು, ಕೆಲವು ಸಣ್ಣ–ಪುಟ್ಟ ಸಮಸ್ಯೆಗಳಿದ್ದವರಿಗೆ ಖಾತೆಗಳನ್ನು ಮಾಡಿಕೊಡಲಾಗುತ್ತಿಲ್ಲ. ಅಧಿಕಾರಿಗಳು ನಿಯಮ ಮುಂದಿಟ್ಟು ಮಾತನಾಡುತ್ತಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಆಯ್ದೆಯಾದರೆ ಸಮಸ್ಯೆಗಳು ಬಗೆಹರಿಯಬಹುದು ಎಂದು ಸಾರ್ವಜನಿಕ ನಾಗೇಂದ್ರ ಪ್ರಸಾದ್ ಪ್ರಜಾವಾಣಿಗೆ ತಿಳಿಸಿದರು.

ಗೋವಿಂದ ಎಂ
ಗೋವಿಂದ ಎಂ
ಬಂಗಾರಪೇಟೆ ಪಟ್ಟಣದ ಪುರಸಭೆ ಕಾರ್ಯಾಲಯ
ಬಂಗಾರಪೇಟೆ ಪಟ್ಟಣದ ಪುರಸಭೆ ಕಾರ್ಯಾಲಯ

ಇಬ್ಬರು ಪ್ರಬಲ ಆಕಾಂಕ್ಷಿಗಳು ವಿವೇಕಾನಂದ ನಗರದ ವಾರ್ಡ್‌ನಿಂದ ಪುರಸಭೆಗೆ ಆಯ್ಕೆಯಾದ ಎಂ. ಗೋವಿಂದ ಮತ್ತು ಗೌತಮ್ ನಗರ ವಾರ್ಡ್‌ ಸದಸ್ಯೆ ಶಾರದ ಬಿ.ಎಸ್ ಈ ಬಾರಿ ಅಧ್ಯಕ್ಷೆ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳೇ ಎಂದೇ ಬಿಂಬಿತರಾಗಿದ್ದಾರೆ.  ವಿವೇಕಾನಂದರ ನಗರದ ಸದಸ್ಯ ಗೋವಿಂದ ಭೋವಿ ಸಮುದಾಯಕ್ಕೆ ಸೇರಿದ್ದು ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕಾರಣ ಇವರ ಹೆಸರು ಮುಂಚೂಣಿಯಲ್ಲಿದೆ. ಇನ್ನು ಶಾರದ ಬಿ.ಎಸ್ ಅವರು ಆದಿ ಕರ್ನಾಟಕ ಸಮುದಾಯದವರಾಗಿದ್ದು ಬಲಗೈ ಸಮುದಾಯವು ಇವರ ಬೆನ್ನಿಗೆ ನಿಂತಿದೆ. ಹೀಗಾಗಿ ಈ ಇಬ್ಬರು ಸಹ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ.  ಅಲ್ಲದೆ ಅಧಿಕಾರವನ್ನು ಇಬ್ಬರಿಗೂ ಹಂಚಿಕೆ ಮಾಡಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದು ಮೊದಲ ಅವಧಿ ಶಾರದ ಬಿ.ಎಸ್ ಅವರ ಪಾಲಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಎರಡನೇ ಅವಧಿಗೆ ಗೋವಿಂದ ಎಂ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ. ಆದರೆ ಶಾಸಕರ ತಿರ್ಮಾನವೇ ಅಂತಿಮವಾದ ಕಾರಣ ಅಧಿಕಾರದ ಅದೃಷ್ಟ ಯಾರಿಗೆ ಹೊಲಿಯಲಿದೆಯೊ ಎಂಬುದನ್ನು ಕಾದು ನೋಡಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT