ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಜನಾಂಗಕ್ಕೆ ರಾಜಕೀಯ ಬಲ ಬೇಕು

ಸಂತ ಸೇವಾಲಾಲ್ ಜಯಂತಿಯಲ್ಲಿ ತಾ.ಪಂ ಅಧ್ಯಕ್ಷ ಆಂಜಿನಪ್ಪ ಹೇಳಿಕೆ
Last Updated 15 ಫೆಬ್ರುವರಿ 2019, 14:10 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಹಲವು ಧರ್ಮ, ಜಾತಿಗಳಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಸಣ್ಣ- ಸಣ್ಣ ಸಮುದಾಯಗಳಲ್ಲಿ ಮಹನೀಯರು ಜನಿಸಿದ್ದಾರೆ. ಈ ಮಹನೀಯರು ದೇಶದಲ್ಲಿ ಸೌಹಾರ್ದತೆ, ಸಹಬಾಳ್ವೆ ನೆಲೆಗೊಳ್ಳುವಂತೆ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ. ದೇಶದಲ್ಲಿ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಜತೆಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸರ್ಕಾರವು ಸಣ್ಣಪುಟ್ಟ ಸಮುದಾಯಗಳ ಮಹನೀಯರನ್ನು ಗುರುತಿಸಿ ಅವರ ಜಯಂತಿ ಆಚರಿಸುವ ಮೂಲಕ ಜನಾಂಗವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ತಳ ಸಮುದಾಯಗಳು ರೈತನಾಗಿ, ಸೈನಿಕನಾಗಿ, ಆಡಳಿತ ವ್ಯವಸ್ಥೆಯ ಒಬ್ಬ ಅಧಿಕಾರಿಯಾಗಿ ಸಮಾಜ ಸೇವೆ ಮಾಡುವಂತಹ ಮಕ್ಕಳನ್ನು ಸಮಾಜಕ್ಕೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು. ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಹೊಂದಿರುವ ಬಂಜಾರ ಜನಾಂಗಕ್ಕೆ ರಾಜಕೀಯ ಮತ್ತು ಆರ್ಥಿಕ ಬಲ ತುಂಬಬೇಕು’ ಎಂದು ಸಲಹೆ ನೀಡಿದರು.

ಏಳಿಗೆಗೆ ಶ್ರಮಿಸಿದರು: ‘ಸರ್ಕಾರವು ವಿವಿಧ ಸಮುದಾಯಗಳ 26 ಜಯಂತಿ ಆಚರಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಬಂಜಾರ ಸಮುದಾಯದ ಸಂತ ಸೇವಾಲಾಲ್ ಚಿಂತಕರಾಗಿ ಸೇವಾ ತತ್ಪರತೆಯಿಂದ ಜನಾಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಅಲ್ಲದೇ, ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರ ಏಳಿಗೆಗೆ ಶ್ರಮಿಸಿದರು’ ಎಂದು ಹೇಳಿದರು.

ಮಹತ್ತರ ಕೊಡುಗೆ: ‘ಭಾರತ ದೇಶವು ಹಚ್ಚ ಹಸಿರಾಗಿರಬೇಕು ಎಂಬುದು ಸೇವಾಲಾಲ್‌ರ ಆಶಯವಾಗಿತ್ತು. ದೇಶದ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆ ಇರುವ ಸಂಸ್ಕೃತಿಯಾಗಿದೆ. ಮಹಾನ್ ಮಾನವತಾವಾದಿ ಮತ್ತು ಅಧ್ಯಾತ್ಮಿಕ ಗುರುಗಳಾಗಿದ್ದ ಸೇವಾಲಾಲ್ ಬಂಜಾರ ಸಮುದಾಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

‘ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸರ್ಕಾರವು ಸೇವಾಲಾಲ್ ಜಯಂತಿ ಆಚರಿಸುವ ಮೂಲಕ ಜನಾಂಗದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಸಮುದಾಯದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಸಮಾಜ ಸೇವೆ, ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಸಾಧಕರಿಗೆ ಸನ್ಮಾನ: ಮೈಸೂರಿನ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಆರ್.ಎಸ್.ನಾಯಕ್ ಅವರು ಸಂತ ಸೇವಾಲಾಲ್ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಂಜಾರ ಸಮುದಾಯದ ಸಾಧಕರನ್ನು ಪುರಸ್ಕರಿಸಲಾಯಿತು. ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೆಜಿಎಫ್‌ ಉಪ ವಿಭಾಗದ ಡಿವೈಎಸ್ಪಿ ಮನೋಜ್‌ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್‌, ತೋಟಗಾರಿಕಾ ಕಾಲೇಜಿನ ವಿಜ್ಞಾನಿ ನಾಗರಾಜ್ ಹಾಗೂ ಬಂಜಾರ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT