ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ

ನರಸಾಪುರ ಎಸ್‌ಎಫ್‌ಸಿಎಸ್‌ ನೂತನ ಅಧ್ಯಕ್ಷ ಮುನಿರಾಜು ಹೇಳಿಕೆ
Last Updated 24 ಫೆಬ್ರುವರಿ 2021, 16:18 IST
ಅಕ್ಷರ ಗಾತ್ರ

ಕೋಲಾರ: ‘ಸೊಸೈಟಿ ವ್ಯಾಪ್ತಿಯ 42 ಹಳ್ಳಿಗಳ ಪ್ರತಿ ಕುಟುಂಬಕ್ಕೂ ಸದಸ್ಯತ್ವ ನೀಡಿಕೆ ಮತ್ತು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ಸಂಕಲ್ಪ ಮಾಡಿದ್ದೇವೆ’ ಎಂದು ತಾಲ್ಲೂಕಿನ ನರಸಾಪುರ ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (ಎಸ್‌ಎಫ್‌ಸಿಎಸ್‌) ನೂತನ ಅಧ್ಯಕ್ಷ ಕೆ.ಎಂ.ಮುನಿರಾಜು ಹೇಳಿದರು.

ನರಸಾಪುರ ಎಸ್‌ಎಫ್‌ಸಿಎಸ್‌ಗೆ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗ್ರಾಮದಲ್ಲಿ ಬುಧವಾರ ಜನರ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಹಿಂದೆ ₹ 9 ಲಕ್ಷ ನಷ್ಟದಲ್ಲಿದ್ದ ಸಂಘ ಇಂದು ₹ 35 ಲಕ್ಷ ಲಾಭದಲ್ಲಿದೆ. ನಾನು ಮೊದಲ ಬಾರಿಗೆ ಸಂಘದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ₹ 67 ಲಕ್ಷವಿದ್ದ ದುಡಿಯುವ ಬಂಡವಾಳ ಇಂದು ₹ 16.44 ಕೋಟಿಗೆ ಏರಿಕೆಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಯನ್ನು ಕಳೆದ 5 ವರ್ಷದ ಅಧಿಕಾರಾವಧಿಯಲ್ಲಿ ಆರ್ಥಿಕವಾಗಿ ಬಲಗೊಳಿಸಿದ್ದೇನೆ. 519 ಮಹಿಳಾ ಸಂಘಗಳಿಗೆ ₹ 22.41 ಕೋಟಿ ಬಡ್ಡಿರಹಿತ ಸಾಲ ವಿತರಿಸಿದ್ದೇವೆ. 731 ರೈತರಿಗೆ ₹ 11.50 ಕೋಟಿ ಬಡ್ಡಿರಹಿತ ಕೆಸಿಸಿ ಸಾಲ ವಿತರಿಸಲಾಗಿದೆ’ ಎಂದು ವಿವರಿಸಿದರು.

‘ಸೊಸೈಟಿಯು ಸಾಲ ವಿತರಣೆ ಹಾಗೂ ಸಾಲ ವಸೂಲಿಯಲ್ಲೂ ಸಾಧನೆ ಮಾಡಿದೆ. ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ 520 ರೈತರಿಗೆ ₹ 6.50 ಕೋಟಿ ಸಾಲ ಮನ್ನಾ ಪ್ರಯೋಜನ ಲಭಿಸಿದೆ’ ಎಂದು ಮಾಹಿತಿ ನೀಡಿದರು.

‘ಸಂಘದ ಕೇಂದ್ರ ಕಚೇರಿ ಕಟ್ಟಡ ದುರಸ್ತಿ, ವಲ್ಲಬ್ಬಿ ಗ್ರಾಮದಲ್ಲಿ ಪಡಿತರ ಮತ್ತು ಆಹಾರ ಧಾನ್ಯ ಸಂಗ್ರಹಿಸಲು ಹಾಗೂ ವಿತರಿಸಲು ಗೋದಾಮು ನಿರ್ಮಾಣ, ಸಂಘದ ಲೆಕ್ಕ ಪುಸ್ತಕಗಳ ಸಂಪೂರ್ಣ ಗಣಕೀಕರಣ, ₹ 2.50 ಕೋಟಿ ಉಳಿತಾಯ ಸಂಗ್ರಹಣೆ, ರಿಯಾಯಿತಿ ದರದಲ್ಲಿ ಗೊಬ್ಬರ ಮಾರಾಟ, ಸರ್ಕಾರದಿಂದ ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ₹ 10 ಲಕ್ಷ ನೆರವು ಮಂಜೂರು ಮಾಡಿಸಿದ್ದು, ಇ-ಸ್ಟಾಂಪ್ ಮಾರಾಟ ವ್ಯವಸ್ಥೆ ಆರಂಭಿಸಿರುವುದು ನನ್ನ ಅವಧಿಯ ಸಾಧನೆಗಳು’ ಎಂದರು.

ಸಭಾಂಗಣ ನಿರ್ಮಾಣ: ‘ಸದಸ್ಯರು ಮತ್ತೆ ನನಗೆ ಅಧಿಕಾರ ನೀಡಿದ್ದು, ಈ ಅವಧಿಯಲ್ಲಿ ಸಂಘಕ್ಕೆ 3 ಅಂತಸ್ತಿನ ನೂತನ ಕಟ್ಟಡ ನಿರ್ಮಾಣ ಮಾಡುತ್ತೇವೆ. ಆಹಾರ ಧಾನ್ಯ, ಗೊಬ್ಬರ, ಕೀಟನಾಶಕಗಳ ವಿತರಣೆಗೆ ಪ್ರತ್ಯೇಕ ನೆಲ ಮಾಳಿಗೆ ನಿರ್ಮಾಣ, ಮೊದಲ ಅಂತಸ್ತಿನಲ್ಲಿ ಸಂಘದ ಕಚೇರಿ, ಸಭಾಂಗಣ, ಸುಸಜ್ಜಿತ ಬ್ಯಾಂಕಿಂಗ್ ಕೌಂಟರ್, ಕಾರ್ಯಕ್ರಮಗಳ ಆಯೋಜನೆಗೆ ಬೃಹತ್ ಸಭಾಂಗಣ ನಿರ್ಮಿಸುವ ಗುರಿಯಿದೆ’ ಎಂದು ತಿಳಿಸಿದರು.

‘ಮಹಿಳಾ ಸ್ವಸಹಾಯ ಸಂಘಗಳಿಗೆ ನಬಾರ್ಡ್‌ನ ಇ–ಶಕ್ತಿ ಯೋಜನೆಯ ಪ್ರಯೋಜನ ಒದಗಿಸುವುದು, ಮಹಿಳೆಯರು, ರೈತರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಚಿನ್ನದ ಸಾಲ ನೀಡಿಕೆ, ರೈತರಿಗೆ ಕೃಷಿ ತರಬೇತಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಸೊಸೈಟಿ ನೂತನ ಉಪಾಧ್ಯಕ್ಷ ಶ್ರೀಧರ್, ನಿರ್ದೇಶಕರಾದ ಬಿ.ಎನ್.ವೆಂಕಟೇಶಪ್ಪ, ಸುರೇಶ್, ಶ್ರೀರಾಮಪ್ಪ ಎಂ.ಮೋಹನ್‌ಕುಮಾರ್, ಟಿ.ನಾಗರಾಜ್, ಪಿ.ಎಂ.ರತ್ನಮ್ಮ, ಸಿ.ಕೆ.ರವಿಕುಮಾರ್, ಬಿ.ಜಮುನಾ, ಬಿ.ರಾಜಣ್ಣ, ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT