ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಬಸವಣ್ಣರ ತತ್ವಾದರ್ಶ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮನೆಯಲ್ಲಿ ನೆಪ ಮಾತ್ರಕ್ಕೆ ಬಸವಣ್ಣನವರ ಭಾವಚಿತ್ರಕ್ಕೆ ಜಾಗ ನೀಡಿದರೆ ಸಾಲದು. ಅವರ ವಿಚಾರಧಾರೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇತ್ತೀಚೆಗೆ ಇಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಇಡೀ ವಿಶ್ವವೇ ಬಸವಣ್ಣನವರ ಆಚಾರ ವಿಚಾರವನ್ನು ಕೊಂಡಾಡುತ್ತಿದೆ. ಬಸವಣ್ಣನವರ ಅನುಯಾಯಿಗಳಾದ ನಾವು ಪಂಚಾಂಗ ಕೇಳಿ ಕಾಲಹರಣ ಮಾಡುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಮನೆಯಲ್ಲಿ ಬಸವಣ್ಣರ ಭಾವಚಿತ್ರಕ್ಕೆ ಜಾಗ ನೀಡಿದ್ದೇವೆಯೇ ಹೊರತು ಅವರ ಆಚಾರ ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡಿಲ್ಲ. ಸಮಾಜ ಸುಧಾರಕ ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ಸಾರ್ಥಕ ಬದುಕಿಗೆ ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಅಂತರಂಗದ ದೇವರ ಕಾಣುವ ಮತ್ತು ಅನುಭವಿಸುವ ಮಾರ್ಗವನ್ನು ಬಸವಣ್ಣನವರು ಇಷ್ಟಲಿಂಗದ ಮೂಲಕ ನೀಡಿದ್ದಾರೆ. ಆದರೆ, ಬಸವಣ್ಣ ನೀಡಿದ ಅಮೂಲ್ಯವಾದ ಇಷ್ಟಲಿಂಗವನ್ನು ಜನ ಇಂದಿಗೂ ಅರ್ಥ ಮಾಡಿಕೊಂಡಿಲ್ಲ’ ಎಂದು ತಾಲ್ಲೂಕು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಗೋಪಿಕೃಷ್ಣನ್ ಅಭಿಪ್ರಾಯಪಟ್ಟರು.

‘ಬಸವಣ್ಣನವರ ವಿಚಾರಧಾರೆಯಲ್ಲಿ ನೈಜತೆಯಿದೆ. ಅನೇಕ ಗಣ್ಯರು ಅವರ ಹಾದಿಯಲ್ಲೇ ಸಾಗಿ ಸಮಾಜ ಸುಧಾರಣೆ ಮಾಡಿದ್ದಾರೆ. ಇಷ್ಟಲಿಂಗ ಕಟ್ಟಿಕೊಂಡ ಮೇಲೆ ಗುಡಿ ದೇವಾಲಯಕ್ಕೆ ಹೋಗುವುದು, ಪಂಚಾಂಗ ನೋಡುವುದು ಎಷ್ಟು ಸರಿ? ಇದು ಬಸವಣ್ಣನವರಿಗೆ ಮಾಡುವ ಅವಮಾನ’ ಎಂದರು.

ಸಾರ್ವಕಾಲಿಕ: ‘ಸಮಾನತೆಯ ಹರಿಕಾರ ಮತ್ತು ಮಹಾನ್‌ ಮಾನವತಾವಾದಿ ಬಸವಣ್ಣನವರ ಆದರ್ಶ ಸಾರ್ವಕಾಲಿಕ. ಅವರು 12ನೇ ಶತಮಾನದಲ್ಲೇ ಸಮಾಜದ ಸುಧಾರಣೆ ಮಾಡಿದ್ದರು. ಅವರು ಕಾಯಕದ ಮಹತ್ವ ಸಾರಿದರು. ಅವರ ವಚನ ಹಾಗೂ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ ಬಣ್ಣಿಸಿದರು.

‘ಸಮಾಜದಲ್ಲಿ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವಲ್ಲಿ ಬಸವಣ್ಣ ನಿರ್ಣಾಯಕ ಪಾತ್ರ ವಹಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣರ ವಚನಗಳ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗಬ್ಬೂರ್ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು