ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ

ಬಸವ ಜಯಂತಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅಭಿಪ್ರಾಯ
Last Updated 26 ಏಪ್ರಿಲ್ 2020, 16:23 IST
ಅಕ್ಷರ ಗಾತ್ರ

ಕೋಲಾರ: ‘ಬಸವಣ್ಣನವರ ವಿಚಾರಧಾರೆಯಲ್ಲಿ ನೈಜತೆ ತುಂಬಿದೆ. ಅನೇಕ ಗಣ್ಯರು ಅವರ ಹಾದಿಯಲ್ಲೇ ಸಾಗಿ ಸಮಾಜ ಸುಧಾರಣೆ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ‘ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವಲ್ಲಿ ಬಸವಣ್ಣ ನಿರ್ಣಾಯಕ ಪಾತ್ರ ವಹಿಸಿದರು’ ಎಂದು ಸ್ಮರಿಸಿದರು.

‘ಬಸವಣ್ಣನವರು ಇಡೀ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಮಾನವತಾವಾದಿ. ಅವರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಅವರ ತತ್ವ ಸಿದ್ಧಾಂತ ಸಾರ್ವಕಾಲಿಕ. ಅವರ ವಚನಗಳು ಇಂದಿಗೂ ಪ್ರಸ್ತುತ’ ಎಂದು ಹೇಳಿದರು.

‘ಬಸವಣ್ಣನವರು ಕಾಯಕದ ಮಹತ್ವ ಸಾರಿದರು. ಕೆಲಸಕ್ಕೆ ಯಾವುದೇ ಜಾತಿಯಿಲ್ಲ, ಕುಲವಿಲ್ಲ. ಸಮಾಜದಲ್ಲಿ ಎಲ್ಲರೂ ಸಮಾನರೇ. ವಿಶ್ವದಲ್ಲಿ ಇರುವುದು ಗಂಡು ಮತ್ತು ಹೆಣ್ಣು ವರ್ಗ ಮಾತ್ರ. ಮಾನವರೆಲ್ಲಾ ಒಂದೇ ಎಂದು ಸಾರಿದ ಬಸವಣ್ಣ ಮಹಾನ್ ಮಾನವಾತವಾದಿ. ಎಲ್ಲಾ ಧರ್ಮ, ಸಮುದಾಯಗಳ ಬಗ್ಗೆ ಚರ್ಚಿಸಿಲು ಅನುಭವ ಮಂಟಪದಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದ್ದರು’ ಎಂದು ಬಣ್ಣಿಸಿದರು.

‘ಬಾಲ್ಯದಿಂದಲ್ಲೇ ಬಸವಣ್ಣ ಒಳ್ಳೆಯ ವಿಚಾರಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಹರಿಕಾರ. ಜಾತಿ ಮತ್ತು ಧರ್ಮ ಮೀರಿ ಎಲ್ಲರೂ ಸಮಾನರು ಎಂದು ಸಾರುವ ಮೂಲಕ ಹೋರಾಟದ ಹಾದಿ ಹಿಡಿದರು. ಸಮ ಸಮಾಜದ ನಿರ್ಮಾಣದ ಕನಸ್ಸು ಕಂಡಿದ್ದರು. ಅವರು ಸ್ಥಾಪಿಸಿದ ಅನುಭವ ಮಂಟಪವು ಈಗಿನ ಸಂಸತ್ ಇದ್ದಂತೆ’ ಎಂದು ತಿಳಿಸಿದರು.

ಚಳವಳಿಗೆ ದಾರಿದೀಪ: ‘ಜಾಗತೀಕರಣದ ಸನ್ನಿವೇಶದಲ್ಲಿ ಬಸವಣ್ಣರ ತತ್ವಾದರ್ಶವು ಪ್ರಸ್ತುತ ಚಳವಳಿಗಳಿಗೆ ದಾರಿದೀಪ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

‘ಆ ಕಾಲಘಟ್ಟದಲ್ಲಿ ಜಾತಿ, ಲಿಂಗ ಸೂತಕವಿಲ್ಲದ ಆದರ್ಶವಿತ್ತು. ಆದರೆ, ಈಗಿನ ಕಾಲಘಟ್ಟದಲ್ಲಿ ಅಸಮಾನತೆ, ಲಿಂಗ ತಾರತಮ್ಯವಿದೆ. ಈ ಸಾಮಾಜಿಕ ಪಿಡುಗು ನಿರ್ಮೂಲನೆಯಾಗಬೇಕು. ದುಡಿಮೆಯೇ ನಿಜವಾದ ಪೂಜೆಯೆಂದು ಭಾವಿಸಿ ಅದರಲ್ಲಿ ದೇವರನ್ನು ಕಾಣಬೇಕು’ ಎಂದು ಕಿವಿಮಾತು ಹೇಳಿದರು.

‘ಬಸವಣ್ಣನವರು ಎಂದಿಗೂ ದೇವಾಲಯಕ್ಕೆ ಹೋದವರಲ್ಲ. ಅವರು ತಮ್ಮ ಕೆಲಸದಲ್ಲಿ ದೇವರು ಕಂಡವರು. ದಲಿತರ, ಶೋಷಿತರ, ದುರ್ಬಲರ, ಮಹಿಳೆಯರ ಪರವಾದ ದಿಟ್ಟ ನಿಲುವು ತಳೆದಿದ್ದರು. ಎಲ್ಲಾ ಜನಾಂಗದವರಿಂದ ಮಾನ್ಯತೆ ಪಡೆದಿದ್ದ ಬಸವಣ್ಣನವರು ಮಹಿಳೆಯರಿಗೂ ಸಮಾನತೆ ಕಲ್ಪಿಸಿದರು’ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಆರ್.ಜ್ಞಾನಮೂರ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT