ಬುಧವಾರ, ಜೂನ್ 29, 2022
21 °C

ಆಹಾರದ ಬಗ್ಗೆ ಜಾಗೃತಿ ವಹಿಸಿ: ಕೆ.ಆರ್‌.ತ್ಯಾಗರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಾವು ತಿನ್ನುತ್ತಿರುವ ಆಹಾರ ವಿಷಮಯವಾಗಿದ್ದು, ಶೇ 80ರಷ್ಟು ಕಲಬೆರಕೆಯಿಂದ ಕೂಡಿದೆ. ಹೀಗಾಗಿ ಪ್ರತಿಯೊಬ್ಬರೂ ಆಹಾರದ ಬಗ್ಗೆ ಜಾಗೃತಿ ವಹಿಸಬೇಕು’ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್‌.ತ್ಯಾಗರಾಜ್ ಸಲಹೆ ನೀಡಿದರು.

ವಿಶ್ವ ಆರೋಗ್ಯ ಸುರಕ್ಷತಾ ದಿನಾಚರಣೆ ಅಂಗವಾಗಿ ಇಲ್ಲಿ ಸೋಮವಾರ ಸಂಘಟನೆ ವತಿಯಿಂದ ನಿರ್ಗತಿಕರು ಹಾಗೂ ನಿರಾಶ್ರಿತರಿಗೆ ಆಹಾರ ಮತ್ತು ಹಣ್ಣು ವಿತರಿಸಿ ಮಾತನಾಡಿ, ‘ಕಳಪೆ ಆಹಾರವು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಲಬೆರಕೆ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿದ್ದು, ಇವುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತಿದೆ’ ಎಂದರು.

‘ಸರ್ಕಾರ ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಸಂಸ್ಥೆಗಳ ಮೇಲೆ ತೀವ್ರ ನಿಗಾ ವಹಿಸುವ ಮೂಲಕ ಜನರ ಆರೋಗ್ಯ ಕಾಪಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳು ಕುರುಕಲು ತಿಂಡಿಗಳ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಬಡ ಜನರ ಬದುಕು ಬರ್ಬರವಾಗಿದೆ. ನಿರ್ಗತಿಕರು ಹಾಗೂ ನಿರಾಶ್ರಿತರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಿದೆ. ಹಸಿವಿನಿಂದ ಸಾವು ನೋವು ಸಂಭವಿಸುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಘಟನೆಯು ನಿರ್ಗತಿಕರಿಗೆ ಹಣ್ಣು, ಆಹಾರ ನೀಡುವ ಮೂಲಕ ವಿಶ್ವ ಆಹಾರ ಸುರಕ್ಷತಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ’ ಎಂದು ತಿಳಿಸಿದರು.

ರೈಲು ನಿಲ್ದಾಣ, ಕ್ಲಾಕ್‌ಟವರ್‌, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಆಹಾರ, ಹಣ್ಣು ವಿತರಿಸಲಾಯಿತು. ಸಂಘಟನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಸ್.ಸುಧಾಕರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಿ.ಟಿ.ಪ್ರಭಾವತಿ, ಸಂಚಾಲಕ ವಿ.ಜಗದೀಶ್, ಸಂಘಟನಾ ಕಾರ್ಯದರ್ಶಿ ಅಮರನಾಥ್‌ಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.