ಮಂಗಳವಾರ, ನವೆಂಬರ್ 12, 2019
28 °C
ಗ್ರಾ.ಪಂ ಅಧಿಕಾರಿಗಳಿಗೆ ಜಿ.ಪಂ ಸಿಇಒ ದರ್ಶನ್‌ ಕಿವಿಮಾತು

ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿ: ಜಿಪಂ ಸಿಇಒ

Published:
Updated:

ಕೋಲಾರ: ‘ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ವಿಶೇಷ ಅಧಿಕಾರ ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿಪಡಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಸಲಹೆ ನೀಡಿದರು.

ತಾಲ್ಲೂಕಿನ ನರಸಾಪುರ ಗ್ರಾ.ಪಂನಲ್ಲಿ ಶನಿವಾರ ನಡೆದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿ, ‘ಪಂಚಾಯತ್‌ರಾಜ್‌ ಇಲಾಖೆಯು ಗ್ರಾ.ಪಂಗಳಿಗೆ ವಿಶೇಷ ಅಧಿಕಾರ ನೀಡಿದೆ. ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ’ ಎಂದರು.

‘ಸಾರ್ವಜನಿಕರು ಮೂಲಸೌಕರ್ಯ ಸಮಸ್ಯೆ ಹೇಳಿಕೊಳ್ಳಲು ಗ್ರಾ.ಪಂ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ವಾರ್ಡ್ ಸಭೆ ನಡೆಸಲಾಗುತ್ತದೆ. ನಂತರ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಅನುಮೋದನೆ ನೀಡಲಾಗುವುದು. ಜತೆಗೆ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು’ ಎಂದು ವಿವರಿಸಿದರು.

‘ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಿ ಗ್ರಾ.ಪಂಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಧಿಕಾರಿಗಳ ತಂಡವು ಅಭಿವೃದ್ಧಿ ಕೆಲಸ ಪರಿಶೀಲಿಸುತ್ತದೆ. ಜನರಿಗೆ ಏನೇ ಸಮಸ್ಯೆ ಎದುರಾದರೂ ಮೊದಲು ಗ್ರಾ.ಪಂ ಅಧಿಕಾರಿಗಳನ್ನು ಕೇಳುತ್ತಾರೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಮಸ್ಯೆ ಬಗೆಹರಿಸಿ’ ಎಂದು ಸಲಹೆ ನೀಡಿದರು.

‘ಕೋಲಾರ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಆದರೆ, ಈಗಲೂ ಅನೇಕ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳಿಲ್ಲ. ಜನರು ಶೌಚಾಲಯ ನಿರ್ಮಿಸಿಕೊಂಡ ಮಾತ್ರಕ್ಕೆ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತವಾಗುವುದಿಲ್ಲ. ಶಾಲೆ, ಕಾಲೇಜು ಅಂಗನವಾಡಿ ಕೇಂದ್ರಗಳಲ್ಲೂ ಶೌಚಾಲಯ ನಿರ್ಮಿಸಬೇಕು’ ಎಂದು ಸೂಚಿಸಿದರು.

ಮನೆ ಕೊಡುತ್ತೇವೆ: ‘ಗುಡಿಸಲಲ್ಲಿ ವಾಸಿಸುತ್ತಿರುವ ಬಡವರಿಗೆ 3 ತಿಂಗಳಲ್ಲಿ ವಸತಿ ಸೌಕರ್ಯ ಕಲ್ಪಿಸುವಂತೆ ಸರ್ಕಾರ ಗಡುವು ನೀಡಿತ್ತು. ಈಗಾಗಲೇ 2 ತಿಂಗಳು ಕಳೆದಿದ್ದು, ಗ್ರಾ.ಪಂ ಸದಸ್ಯರು ಫಲಾನುಭವಿಗಳ ಪಟ್ಟಿ ನೀಡಿದರೆ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುತ್ತೇವೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಕಂಟಕವಾಗಿರುವ ನೀಲಗಿರಿ ಮರಗಳನ್ನು ರೈತರು ಸ್ವಯಂಪ್ರೇರಿತರಾಗಿ ತೆರವುಗೊಳಿಸಬೇಕು. ಸರ್ಕಾರಿ ಜಾಗದಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ತೆರವು ಮಾಡಬೇಕು. ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಂಡು ನೀರಿನ ಸಮಸ್ಯೆ ನಿವಾರಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಸಮಸ್ಯೆ ಬಗೆಹರಿಸುತ್ತೇವೆ: ‘ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಿರುವ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಜಿ.ಪಂಯಿಂದ ಅನುದಾನ ಬಿಡುಗಡೆ ಮಾಡಿಸುತ್ತೇವೆ. ಜಿ.ಪಂ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕುಂದು ಕೊರತೆ ಆಲಿಸಿ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಶ್ರೀ ಭರವಸೆ ನೀಡಿದರು.

ಕೈಗಾರಿಕೆಗಳು ಸ್ಪಂದಿಸುತ್ತಿಲ್ಲ: ‘ನರಸಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಕೈಗಾರಿಕೆಗಳಿವೆ. ಆದರೆ, ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಅಭಿವೃದ್ಧಿ ಕೆಲಸ ಮಾಡಲು ಕೈಗಾರಿಕೆಗಳು ಸ್ಪಂದಿಸುತ್ತಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಗ್ರಾಮಸ್ಥರು ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೌರ ವಿದ್ಯುತ್‌ ದೀಪ ಮತ್ತು ಡೆಸ್ಕ್ ವಿತರಿಸಲಾಯಿತು. ನರಸಾಪುರ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಶಬೀನಾ, ಮಂಜುನಾಥ್, ಜಯಲಕ್ಷ್ಮೀ, ತಾ.ಪಂ ಸಹಾಯಕ ನಿರ್ದೇಶಕ ಎಂ.ಚಂದ್ರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)