ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ: ಚಿಣ್ಣರ ಕಲರವ

ಹಬ್ಬದ ಸಂಭ್ರಮ: ಮಕ್ಕಳು–ಪೋಷಕರಿಂದ ಉತ್ತಮ ಪ್ರತಿಕ್ರಿಯೆ
Last Updated 16 ಮೇ 2022, 14:42 IST
ಅಕ್ಷರ ಗಾತ್ರ

ಕೋಲಾರ: ಬೇಸಿಗೆ ರಜೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಜಿಲ್ಲೆಯಾದ್ಯಂತ ಸೋಮವಾರ ಪುನರಾರಂಭವಾದವು.

ಜಿಲ್ಲೆಯಾದ್ಯಂತ ಶನಿವಾರ ಮತ್ತು ಭಾನುವಾರವೇ ಶಿಕ್ಷಕರು ಶಾಲಾ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಿದ್ಧಗೊಳಿಸಿದ್ದರು. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ತರಗತಿ ಆರಂಭಿಸಲಾಗಿದ್ದು, ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಿಕ್ಷಕರು ಶಾಲೆಯ ಪ್ರವೇಶ ಭಾಗದಲ್ಲೇ ಮಕ್ಕಳಿಗೆ ಸಿಹಿ ತಿನಿಸು, ಲೇಖನಿ ಸಾಮಗ್ರಿ, ಹೂವು ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ಶಾಲೆಗಳನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂತು.

ಪಾಠ ಪ್ರವಚನ ಕೇಳುವ ಉತ್ಸಾಹದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ಹಾಜರಾದರು. ಹೊಸ ತರಗತಿಗೆ ಕುಳಿತುಕೊಳ್ಳುವ ಸಂಭ್ರಮವೂ ಮಕ್ಕಳ ಮುಖದಲ್ಲಿತ್ತು. ಕೆಲ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಶಾಲಾ ಆರಂಭವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗಿತ್ತು. ಮಧ್ಯಾಹ್ನ ಬಿಸಿಯೂಟದೊಂದಿಗೆ ಮಕ್ಕಳಿಗೆ ವಿಶೇಷ ಸಿಹಿ ಉಣಬಡಿಸಿ ಖುಷಿಪಡಿಸಲಾಯಿತು. ರಜೆ ಬಳಿಕ ಶಾಲೆ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತು. ಮೊದಲ ದಿನವಾದ ಕಾರಣ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ. ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು.

ಹಾಜರಾತಿ ಕಡಿಮೆ: ‘ಮೊದಲ ದಿನವಾದ ಕಾರಣ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸ್ವಲ್ಪ ಕಡಿಮೆಯಿತ್ತು. ಮಂಗಳವಾರ ಹಾಜರಾತಿ ಸುಧಾರಣೆಯಾಗಲಿದೆ. ಶಾಲೆಗಳಲ್ಲಿ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ ಸಮರ್ಪಕವಾಗಿರುವಂತೆ ಸೂಚಿಸಲಾಗಿದೆ’ ಎಂದು ಡಿಡಿಪಿಐ ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

‘ಮಿಂಚಿನ ಸಂಚಾರ ತಂಡಗಳು ಜಿಲ್ಲೆಯಾದ್ಯಂತ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಶಾಲಾರಂಭಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಕೋವಿಡ್ ಆತಂಕ ಇಲ್ಲದಿದ್ದರೂ ಮಕ್ಕಳ ಸುರಕ್ಷತೆ ಮುಖ್ಯ. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಸೂಚಿಸಿದ್ದೇವೆ. ಈ ಸಂಬಂಧ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT