ಶನಿವಾರ, ನವೆಂಬರ್ 23, 2019
17 °C

ಕಚೇರಿ ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ

Published:
Updated:

ಕೋಲಾರ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕೆ.ಎಸ್‌.ನಾಗರಾಜಗೌಡ ತಮ್ಮ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಪ್ರತಿನಿತ್ಯದಂತೆ ಶುಕ್ರವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ನಾಗರಾಜಗೌಡ ಕಚೇರಿ ಶೌಚಾಲಯ ಕೊಳಕಾಗಿರುವುದನ್ನು ಕಂಡು ಸ್ವಚ್ಛಗೊಳಿಸಲು ಮುಂದಾದರು. ಡಿ ಗ್ರೂಪ್‌ ಸಿಬ್ಬಂದಿಯೊಂದಿಗೆ ಬ್ರಶ್‌ ಹಿಡಿದು ಶೌಚಾಲಯದ ಕಮೋಡ್ ಹಾಗೂ ನೆಲವನ್ನು ಉಜ್ಜಿ ಸ್ವಚ್ಛಗೊಳಿಸಿದರು.

‘ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು’ ಎಂದು ಹೇಳುತ್ತಲೇ ಸಿಬ್ಬಂದಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿದರು. ಇದರಿಂದ ಕಸಿವಿಸಿಗೊಂಡ ಕಚೇರಿಯ ಇತರೆ ಸಿಬ್ಬಂದಿ ಸಹ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

‘ಶಾಲೆ ಹಾಗೂ ಕಚೇರಿ ಮನೆಯಿದ್ದಂತೆ. ಸ್ವಂತ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆಯೇ ಕಚೇರಿ, ಶಾಲೆಯಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಾವುದೇ ವೃತ್ತಿ ಕೀಳಲ್ಲ. ಶಿಕ್ಷಕರು ಕೀಳರಿಮೆ ಬಿಟ್ಟು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಬೇಕು’ ಎಂದು ನಾಗರಾಜಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)