ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಒ ಸಭೆ: ತರಗತಿ ಸಮಯ ನಿರ್ಧಾರ

Last Updated 19 ನವೆಂಬರ್ 2019, 15:34 IST
ಅಕ್ಷರ ಗಾತ್ರ

ಕೋಲಾರ: ‘ನಗರದ ನೂತನ ಪದವಿ ಪೂರ್ವ ಕಾಲೇಜಿನಲ್ಲಿನ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ತರಗತಿಗಳನ್ನು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ಏಕಕಾಲದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.

ತರಗತಿ ಸಮಯದ ಸಂಬಂಧ ಇಲ್ಲಿ ಮಂಗಳವಾರ ನಡೆದ ಪ್ರೌಢ ಶಾಲೆ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಭೆಯಲ್ಲಿ ಶಾಲೆ ಮತ್ತು ಕಾಲೇಜು ತರಗತಿ ಸಮಯ ಬದಲಾವಣೆಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಬಿಇಒ, ‘ಬುಧವಾರದಿಂದಲೇ (ನ.20) ತರಗತಿಗಳ ಹೊಸ ವೇಳಾಪಟ್ಟಿ ಜಾರಿಯಾಗಲಿದೆ. ಶಿಕ್ಷಕರು ಹಾಗೂ ಉಪನ್ಯಾಸಕರು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಫಲಿತಾಂಶ ಸುಧಾರಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರೌಢ ಶಾಲೆ ತರಗತಿಗಳು ಈ ಹಿಂದೆ 11.45ಕ್ಕೆ ಆರಂಭವಾಗುತ್ತಿದ್ದವು. ಇದರಿಂದ ಪಾಠ ಪ್ರವಚನಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜು ಸಿಬ್ಬಂದಿಯ ಮನವೊಲಿಸಿ ತರಗತಿ ಸಮಯ ಬದಲಾವಣೆಯ ನಿರ್ಧಾರ ಕೈಗೊಳ್ಳಲಾಗಿದೆ. ಲಭ್ಯ ಇರುವ ಶಾಲಾ ಕೊಠಡಿಗಳನ್ನು ಬಳಸಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.

‘ಶಾಲೆ ಮತ್ತು ಕಾಲೇಜಿನ ಶೌಚಾಲಯಗಳನ್ನು ಸ್ವಚ್ಛಗೊಳಿಸದ ಕಾರಣ ಮಲಮೂತ್ರ ಕಟ್ಟಿಕೊಂಡು ಸಮಸ್ಯೆಯಾಗಿದೆ. ಇದರಿಂದ ಮಕ್ಕಳು ಶೌಚಾಲಯ ಬಳಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಶೌಚಾಲಯ ಸ್ವಚ್ಛ ಮಾಡಿಸಬೇಕು’ ಎಂದು ಶಿಕ್ಷಕರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಬಿಇಒ ನಗರಸಭೆ ಆಯುಕ್ತರಿಗೆ ಕರೆ ಮಾಡಿ ಶಾಲೆ ಮತ್ತು ಕಾಲೇಜಿನ ಶೌಚಾಲಯಗಳನ್ನು ಸ್ವಚ್ಛ ಮಾಡಿಸುವಂತೆ ಕೋರಿದರು.

ಕಾಲೇಜಿನ ಪ್ರಾಂಶುಪಾಲ ಜಯರಾಮ್, ಉಪಪ್ರಾಂಶುಪಾಲ ರುದ್ರಪ್ಪ, ಉಪನ್ಯಾಸಕರು, ಶಾಲೆಯ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT