ಗುರುವಾರ , ಆಗಸ್ಟ್ 6, 2020
28 °C

ಮಳೆ: ದ್ವಿದಳ ಬಿತ್ತನೆಗೆ ವರದಾನ, ತರಕಾರಿಗೆ ಬರೆ

ಸರೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ತಾಲ್ಲೂಕಿನ ಹಲವು ಕಡೆ ಸುಮಾರು ಒಂದೂವರೆ ತಿಂಗಳಿನಿಂದ ಆಗಾಗ ಮಳೆ ಬೀಳುತ್ತಿರುವುದರಿಂದ ಮಾವು ಸೇರಿದಂತೆ ಕೆಲವು ಬೆಳೆಗಳಿಗೆ ನಷ್ಟವಾಗಿದೆ. ಆದರೂ ಸಣ್ಣ ಮತ್ತು ಅತಿ ಸಣ್ಣ ರೈತರ ಮಳೆಯಾಶ್ರಿತ ಬೆಳೆಗಳಿಗೆ ಉತ್ತಮ ವಾತಾವರಣ ಕಂಡುಬಂದಿರುವುದರಿಂದ ಮುಖದಲ್ಲಿ ಮಂದಹಾಸ ಮೂಡಿದೆ.

ಪೂರ್ವ ಮುಂಗಾರಿನ ಮಳೆ ಹೆಚ್ಚು ಸುರಿಯುತ್ತಿರುವುದರಿಂದ ಸಣ್ಣ ರೈತರು ಬೆಳೆಯುವ ಮೂಲಂಗಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್‌ಗಳ ಬೆಳೆ ಬಂದಿದೆ. ಮಾವು, ಟೊಮೊಟೊ, ಕೋಸು, ಬಿನ್ಸ್, ಹೂವು ಸೇರಿದಂತೆ ಆನೇಕ ಬೆಳೆಗಳಿಗೆ ಮಳೆರಾಯ ರೈತರಿಗೆ ಕೆಲಸ ಕಡಿಮೆ ಮಾಡಿದ್ದಾನೆ. ರೈತರು 40 ದಿನಗಳಿಂದ ನೀರು ಹರಿಸುವುದನ್ನೇ ಮರೆತು ಬಿಟ್ಟಿದ್ದಾರೆ.

ಮಳೆ ಸುರಿದಾಗ ಪ್ರತಿಬಾರಿಯೂ ಔಷಧಿಗಳನ್ನು ಬೆಳೆಗಳಿಗೆ ಸಿಂಪಡಿಸುವ ಕೆಲಸವಾಗಿದೆ. ಇದರಿಂದಾಗಿ ದಾಖಲೆಯ ಉಷ್ಣಾಂಶದ ನಡುವೆಯೂ ಬಹುತೇಕ ಎಲ್ಲ ಬೆಳೆಗಳ ಫಸಲು ಮತ್ತು ಇಳುವರಿ ಕಂಡು ಬರುತ್ತಿದೆ. ಜೊತೆಗೆ ಬೆಲೆಯು ಸಹ ಏರಿಕೆಯಾಗುತ್ತಿದ್ದು ರೈತರು ಕೈ ತುಂಬ ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಕೃಷಿ ಹೊಂಡ, ಚೆಕ್‍ಡ್ಯಾಂ, ಕುಂಟೆಗಳಿಗೆ ನೀರು: ಮುಂಗಾರು ಪ್ರವೇಶಕ್ಕೂ ಮೊದಲೇ ಮಳೆ ಪ್ರಾರಂಭವಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಭರ್ಜರಿ ಮಳೆ ಬರುತ್ತಿರುವುದರಿಂದ ರೈತರ ಕೃಷಿ ಹೊಂಡ, ಚೆಕ್‍ಡ್ಯಾಂ ಮತ್ತು ಸಣ್ಣ ಪುಟ್ಟ ಕುಂಟೆಗಳಿಗೆ ನೀರು ಬಂದಿದೆ.

ಒಣಗಿ ಹೋಗಿದ್ದ ಕೆರೆಗಳಲ್ಲಿಯೂ ಅಲ್ಲಲ್ಲಿ ನೀರು ಕಾಣಿಸುವಂತಾಗಿದೆ. ಇದರಿಂದಾಗಿ ಮೂಕ ಪ್ರಾಣಿಗಳಿಗೆ ನೀರು ಮತ್ತು ಮೇವು ಸಿಗುತ್ತಿದೆ.

ತೊಗರಿ, ಅವರೆ, ನೆಲಗಡಲೆ ಬಿತ್ತನೆ: ಪ್ರತಿ ವರ್ಷ ಸಾಮಾನ್ಯವಾಗಿ ಮಳೆ ಇಲ್ಲದೆ ನೆಲಗಡಲೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದ ರೈತರಿಗೆ ಈ ವರ್ಷ ಅವಕಾಶ ಸಿಕ್ಕಿದೆ.

ನಿಗದಿತ ಸಮಯಕ್ಕಿಂತ ಮುಂಚೆಯೇ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಬಹುತೇಕ ರೈತರು ನೆಲಗಡಲೆ ಜತೆಗೆ ತೊಗರಿ, ಅವರೆ, ಅಲಸಂದಿಯನ್ನೂ ಬಿತ್ತನೆ ಮಾಡಿದ್ದಾರೆ. ಬಿತ್ತನೆ ನಂತರವೂ ಉತ್ತಮ ಮಳೆಯಾಗುತ್ತಿರುವುದರಿಂದ ಈ ವರ್ಷ ಉತ್ತಮ ಬೆಳೆ ಬರಬಹುದು ಎಂದು ರೈತರು ಆಸೆಯಿಂದ್ದಿದ್ದಾರೆ.

ರಸಗೊಬ್ಬರ ವ್ಯಾಪಾರ ಜೊರು

ರಸಗೊಬ್ಬರ ಮತ್ತು ಬೆಳೆ ಔಷಧಿ ಅಂಗಡಿಗಳ ಮುಂದೆ ರೈತರು ಸರದಿಯಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ. ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗುತ್ತಿದೆ.

ಬದನೆ, ಬೆಂಡೆ, ಟೊಮೊಟೊ, ಹೂಕೋಸು, ಹುರಳಿಕಾಯಿ ಬೆಲೆ ಏರಿಕೆಯಾಗಿ ಎರಡು ತಿಂಗಳಿಂದ ಮುಂದುವರೆದಿದೆ. ಮಳೆ ಬಿದ್ದ ನಂತರದ ದಿನಗಳಲ್ಲಿ ತರಕಾರಿ ಬೆಳೆಗಳಿಗೆ ಔಷಧಿ ಸಿಂಪಡಿಸಲೇಬೇಕು. ಹಾಗಾಗಿ ರೈತರಿಗೆ ಖರ್ಚು ಹೆಚ್ಚುತ್ತಿದೆ. ಬೆಲೆ ಇದೆ. ಇಳುವರಿ ಇಲ್ಲ. ಹಾಗಾಗಿ ತರಕಾರಿ ಬೆಳೆದ ರೈತರಿಗೆ ಅದೃಷ್ಟ ಕೈಕೊಟ್ಟಿದೆ.

*  ಮಳೆಯಿಂದಾಗಿ ಟೊಮೊಟೊ, ಮಾವು ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಮುನಿಸ್ವಾಮಿ, ತರಕಾರಿ ವ್ಯಾಪಾರಿ

* ಮಳೆಯಿಂದಾಗಿ ಸಾಕಷ್ಟು ತರಕಾರಿ ಬೆಳೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೈತರು ನಷ್ಟದ ಭೀತಿಯಲ್ಲಿ ಇದ್ದಾರೆ.

ರಾಮಮೂರ್ತಿ, ತೋಟಗಾರಿಕಾ ಇಲಾಖೆ ತಾಲ್ಲೂಕು ನಿರ್ದೇಶಕ, ಬಂಗಾರಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು