ಕೊಕ್ಕರೆ ಬದುಕಿಗೆ ಕುತ್ತು

7
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬರದ ಛಾಯೆ; ಯಾವುದೇ ಕೆರೆಗಳಲ್ಲಿಯೂ ನೀರಿಲ್ಲ

ಕೊಕ್ಕರೆ ಬದುಕಿಗೆ ಕುತ್ತು

Published:
Updated:
Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ನೀರು ಹಕ್ಕಿ ಕೊಕ್ಕರೆಗೆ ನೆಲೆ ಇಲ್ಲದಂತಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ನೀರನ್ನು ಅವಲಂಬಿಸಿದ್ದ ಮುಳುಗು ಹಕ್ಕಿ. ನೀರು ಕೋಳಿ ಕಣ್ಮರೆಗಿದ್ದರೂ, ಉಭಯವಾಸಿಯಾದ ಕೊಕ್ಕರೆ ಕಣ್ಣಿಗೆ ಬೀಳುತ್ತಿದೆ.

ಕೊಕ್ಕರೆ ಸಂಘ ಜೀವಿ. ಅದು ಒಂಟಿಯಾಗಿ ಜೀವಿಸುವುದಿಲ್ಲ. ಹಿಂಡಿನಲ್ಲಿ ಬದುಕುವ ಪಕ್ಷಿ. ಮೀನು, ಕ್ರಿಮಿ ಕೀಟ ಅದರ ಆಹಾರ. ಅದರ ಕಾಲುದ್ದದ ನೀರಲ್ಲಿ ಒಂಟಿ ಕಾಲಿನ ಮೇಲೆ ಧ್ಯಾನ ಭಂಗಿಯಲ್ಲಿ ನಿಲ್ಲುವ ಈ ಹಕ್ಕಿ, ಮೀನು ಸಮೀಪಿಸುತ್ತಿದ್ದಂತೆ ತನ್ನ ಉದ್ದನೆಯ ಕತ್ತನ್ನು ಬಾಗಿಸಿ ಕೊಕ್ಕಿನಿಂದ ಹಿಡಿದು ನುಂಗುತ್ತೆ. ಆದರೆ ಈಗ ಅಂತಹ ದೃಶ್ಯವನ್ನು ಕಾಣಲು ಸಾಧ್ಯವಿಲ್ಲ. ಕಾರಣ ತಾಲ್ಲೂಕಿನ ಯಾವುದೇ ಕೆರೆಯಲ್ಲಿ ನೀರಿಲ್ಲ.

ಕೊಕ್ಕರೆ ಹಿಂಡುಗಳು ಗ್ರಾಮೀಣ ಪ್ರದೇಶದಲ್ಲಿ ನೆಲೆಸತೊಡಗಿವೆ. ತಮ್ಮ ಬದುಕಿನ ಶೈಲಿ ಬದಲಿಸಿಕೊಂಡಿವೆ. ತಿಪ್ಪೆ, ಚರಂಡಿಯಲ್ಲಿ ಓಡಾಡುತ್ತಾ ಕ್ರಿಮಿ, ಕೀಟಗಳನ್ನು ಹುಡುಕಿ ತಿನ್ನುತ್ತಿವೆ. ಎಮ್ಮೆ, ಎತ್ತು, ಹಸುಗಳ ಮೇಲೆ ಕುಳಿತು ಹೇನು, ಪಿಡದೆಗಳನ್ನು ಹೆಕ್ಕಿ ತಿನ್ನುತ್ತಿವೆ. ಪ್ರಾಣಿಗಳು ಮೇಯುವ ಕಡೆ ಹೋಗಿ, ಪ್ರಾಣಿ ಹುಲ್ಲು ತಿನ್ನುವಾಗ ಹೊರಗೆ ಜಿಗಿಯುವ ಮಿಡತೆ, ಹುಳು ಹುಪ್ಪಟೆ ಹಿಡಿದು ಹೊಟ್ಟೆಗೆ ಸೇರಿಸುತ್ತಿವೆ.

ರೈತರು ಉಳುಮೆ ಮಾಡುವ ಕಡೆ ನೆಲದಿಂದ ಹೊರಗೆ ಬೀಳುವ ಗೊಣ್ಣೆ ಹುಳುಗಳನ್ನು ತಿನ್ನುವುದು ಸಾಮಾನ್ಯವಾಗಿದೆ. ತಿಪ್ಪೆ ಗೊಬ್ಬರ ಚೆಲ್ಲುವ ಕಡೆಯಲ್ಲೂ ಕೊಕ್ಕರೆ ಹಿಂಡು ಹಾಜರಿರುತ್ತದೆ. ಹೀಗೆ ಆಹಾರಕ್ಕಾಗಿ ನಾನಾ ಕಸರತ್ತು ನಡೆಸುತ್ತಿವೆ. ಕೆಲವರು ಅದೇ ಸಮಯ ಸಾಧಿಸಿ ಉದ್ದನೆಯ ಕೋಲಿನಿಂದ ಕೊಕ್ಕರೆಯನ್ನು ಹೊಡೆದು ಸಾಯಿಸಿ ಸುಟ್ಟು ತಿನ್ನುತ್ತಾರೆ.

ನೀರಿನಿಂದ ವಂಚಿತವಾದ ಕೊಕ್ಕರೆಗಳನ್ನು ಕೆಲವರು ಬೇಟೆ ಆಡುವರು. ಅರಳಿ ಮರದ ಅಂಟನ್ನು ಕಡ್ಡಿಗಳಿಗೆ ಸವರಿ, ಕುಂಬಾರ ಹುಳುವೊಂದನ್ನು ದಾರದಿಂದ ಕಟ್ಟಿ ಬಿಡುತ್ತಾರೆ. ಕುಂಬಾರ ಹುಳುವನ್ನು ತಿನ್ನಲು ಬರುವ ಕೊಕ್ಕರೆಯ ಪುಕ್ಕ ಅಂಟಿಗೆ ಅಂಟಿಕೊಂಡು ಹಾರಲಾಗದೆ ಒದ್ದಾಡುತ್ತದೆ. ಆಗ ಅದನ್ನು ಹಿಡಿಯುವರು. ಇನ್ನು ಕೆಲವರು ಬಂದೂಕಿಗೆ ಬಾಲ್ಸ್‌ಗಳನ್ನು ತುಂಬಿ ಕೊಕ್ಕರೆ ಹಿಂಡಿನ ಮೇಲೆ ಹಾರಿಸುವರು. ಆಗ ಗುಂಡು ತಾಗಿದ ಪಕ್ಷಿಗಳು ರಕ್ತದ ಮಡುವಿನಲ್ಲಿ ಬಿದ್ದು ಸಾಯುತ್ತವೆ.

ಈ ಹಿಂದೆ ನೀರು ಮುಗಿದ ಕರೆಗಳನ್ನು ತೊರೆದು, ನೀರುಳ್ಳ ಕೆರೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದವು. ಕೆರೆಗೆ ನೀರು ಬಂದಾಗ ಮತ್ತೆ ಹಿಂದಿರುಗುತ್ತಿದ್ದವು. ಆದರೆ ಈಗ ಯಾವುದೇ ಕೆರೆಯಲ್ಲಿ ನೀರಿಲ್ಲ. ಹೋಗುವುದಾದರೂ ಎಲ್ಲಿಗೆ? ಹೊಟ್ಟೆ ಪಾಡಿಗೆ ಕೆರೆ ಬಿಟ್ಟು ಬಯಲಿಗೆ ಬಂದ ಕೊಕ್ಕರೆಗಳು ಮನುಷ್ಯನ ನಾಲಗೆ ಚಪಲಕ್ಕೆ ಬಲುಯಾಗುತ್ತಿರುವುದು ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !