ಗುರುವಾರ , ಫೆಬ್ರವರಿ 20, 2020
17 °C
ಸಮಾವೇಶದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳಿಕೆ

ದ್ವಿತಳಿ ಗೂಡು: ರೈತರು ಆರ್ಥಿಕವಾಗಿ ಸಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಚೀನಾ ರೇಷ್ಮೆ ಆಮದು ತಡೆಯುವ ನಿಟ್ಟಿನಲ್ಲಿ 2022ರ ವೇಳೆಗೆ ದೇಶದಲ್ಲಿ 12 ಸಾವಿರ ಮೆಟ್ರಿಕ್ ಟನ್ ದ್ವಿತಳಿ ರೇಷ್ಮೆ ಗೂಡು ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಮಂಜುನಾಥ್ ಹೇಳಿದರು.

ರೇಷ್ಮೆ ಇಲಾಖೆ, ಕೇಂದ್ರ ರೇಷ್ಮೆ ಸಂಶೋಧನಾ ವಿಸ್ತರಣಾ ಕೇಂದ್ರ ಹಾಗೂ ಚನ್ನಪಟ್ಟಣದ ರೇಷ್ಮೆ ತರಬೇತಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆ ಗೂಡು ಬೆಳೆಗಾರರ ತಾಂತ್ರಿಕ ಸಮಾವೇಶದಲ್ಲಿ ಮಾತನಾಡಿದರು.

‘ವಿದೇಶಿ ರೇಷ್ಮೆ ಆಮದು ಶುಲ್ಕ ಹೆಚ್ಚಿಸಿರುವುದರ ಜತೆಯಲ್ಲೇ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಆದ್ಯತೆ ನೀಡುತ್ತೇವೆ. ಬಟ್ಟೆ ನೇಯುವವರು ಸ್ವದೇಶಿ ನೂಲು ಕೊಳ್ಳಲು ಮುಂದಾಗಲಿದ್ದು, ರೇಷ್ಮೆ ಉದ್ಯಮಕ್ಕೆ ಭವಿಷ್ಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ತಿಳಿಸಿದರು.

‘ರೈತರು ವಿದೇಶಿ ಪೈಪೋಟಿಗೆ ಅನುಗುಣವಾಗಿ ಗುಣಮಟ್ಟದ ರೇಷ್ಮೆ ಗೂಡು ಬೆಳೆದು ನೀಡಬೇಕು. ಪ್ರತಿ ರೈತರು ದ್ವಿತಳಿ ರೇಷ್ಮೆ ಗೂಡು ಬೆಳೆಯಬೇಕು. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಸಲಹೆ ನೀಡಿದರು.

‘ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಲಾಭದಾಯಕ ಹಿಪ್ಪುನೇರಳೆ ಬೆಳೆಯಬೇಕು. ಆಧುನಿಕ ಕೃಷಿ ಪದ್ಧತಿ ಮೂಲಕ ನೀರಿನ ಮಿತ ಬಳಕೆ ಮಾಡಬೇಕು. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೈತರು ಬೇಡಿಕೆಗೆ ತಕ್ಕಂತೆ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಹೆಚ್ಚಿಸಿದರೆ ಚೀನಾ ರೇಷ್ಮೆ ಆಮದು ನಿಯಂತ್ರಿಸಬಹುದು’ ಎಂದು ಕಿವಿಮಾತು ಹೇಳಿದರು.

ಸೋಂಕು ನಿವಾರಣೆ: ‘ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳೆಯುವುದರ ಜತೆಗೆ ಸೋಂಕು ನಿವಾರಣೆಗೆ ಆದ್ಯತೆ ನೀಡಬೇಕು. ರೋಗ ಸುಳಿಯದಂತೆ ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಉಷ್ಣಾಂಶ ಹಾಗೂ ತೇವಾಂಶವನ್ನು ನಿಗದಿತ ಪ್ರಮಾಣದಲ್ಲಿ ಕಾಪಾಡಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಶಿಧರ್ ಹೇಳಿದರು.

ಹಿಪ್ಪುನೇರಳೆ ಗಿಡಕ್ಕೆ ಬರುವ ರೋಗಗಳು ಮತ್ತು ಅವುಗಳ ನಿಯಂತ್ರಣ, ದ್ವಿತಳಿ ರೇಷ್ಮೆ ಗೂಡು ಉತ್ಪಾದಿಸಲು ಅನುಸರಿಸಬೇಕಾದ ತಾಂತ್ರಿಕ ಕ್ರಮಗಳ ಕುರಿತು ಮಾಹಿತಿ ನೀಡಿದರು. ಚನ್ನಪಟ್ಟಣ ರೇಷ್ಮೆ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರಮೇಶ್ ಅವರು ಮಣ್ಣು ಪರೀಕ್ಷೆ ಮತ್ತು ಮಣ್ಣಿನಲ್ಲಿ ಪೋಷಕಾಂಶ ನಿರ್ವಹಣೆ ಕುರಿತು ವಿವರಿಸಿದರು.

ರೇಷ್ಮೆ ನಿರೀಕ್ಷಕ ಶ್ರೀನಿವಾಸಗೌಡ, ಕೇಂದ್ರ ರೇಷ್ಮೆ ಮಂಡಳಿ ತಾಂತ್ರಿಕ ಸಹಾಯಕ ವೆಂಕಟರಮಣಪ್ಪ, ರೇಷ್ಮೆ ಪ್ರದರ್ಶಕ ಬ್ಯಾಟರಾಯಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು