ಬಿಜೆಪಿ ಅಭ್ಯರ್ಥಿಗೆ ಜನ ಸಂಪರ್ಕವಿಲ್ಲ: ಕೃಷ್ಣಪ್ಪ

ಶುಕ್ರವಾರ, ಏಪ್ರಿಲ್ 19, 2019
30 °C

ಬಿಜೆಪಿ ಅಭ್ಯರ್ಥಿಗೆ ಜನ ಸಂಪರ್ಕವಿಲ್ಲ: ಕೃಷ್ಣಪ್ಪ

Published:
Updated:

ಕೋಲಾರ: ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಬವಣೆ ತಪ್ಪಿದ್ದಲ್ಲ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಲು ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬಾರದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ಜಿಲ್ಲಾ ಸಮಿತಿ ಸದಸ್ಯ ಕೃಷ್ಣಪ್ಪ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಕ್ಷೇತ್ರದ ಜನರ ಸಂಪರ್ಕವಿಲ್ಲ. ಜಿಲ್ಲೆಯ ರೈತರು, ದಲಿತರು, ಅಲ್ಪಸಂಖ್ಯಾತರ ಸಮಸ್ಯೆ ಪರ ಅವರು ಎಂದಿಗೂ ಧ್ವನಿ ಎತ್ತಿಲ್ಲ’ ಎಂದು ದೂರಿದರು.

‘ಚುನಾವಣೆ ಉದ್ದೇಶಕ್ಕಾಗಿ ಈಗ ಏಕಾಏಕಿ ಜಿಲ್ಲೆಗೆ ಬಂದಿರುವ ಮುನಿಸ್ವಾಮಿ ಚುನಾವಣೆ ನಂತರ ಕ್ಷೇತ್ರ ಖಾಲಿ ಮಾಡುತ್ತಾರೆ. ಅವರಿಗೆ ಜಿಲ್ಲೆಯ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾಳಜಿಯಿಲ್ಲ. ಮೊದಲು ಜಿಲ್ಲೆಯ ಜನರ ಜತೆ ಬೆರೆತು ಗುರುತಿಸಿಕೊಂಡು ಸಮಸ್ಯೆಗಳಿಗೆ ಧ್ವನಿಯಾಗಲಿ, ಆ ನಂತರ ಮತ ಯಾಚಿಸಲಿ’ ಎಂದರು.

‘ಜಿಲ್ಲೆಯು ಬರಪೀಡಿತ ಪ್ರದೇಶವಾಗಿದ್ದು, ನೀರು ಹಾಗೂ ರೈತರ ಸಮಸ್ಯೆಗಳು ಸಾಕಷ್ಟಿವೆ. ರಾಜಕೀಯ ನಾಯಕರು ಸಮಸ್ಯೆ ಬಗೆಹರಿಸದೆ ಮತ ಕೇಳುವುದು ನಾಚಿಕೆಗೇಡು. ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸಿದ ಮೋದಿ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸಬಾರದು’ ಎಂದು ತಿಳಿಸಿದರು.

‘ಕ್ಷೇತ್ರದ ಜನರೊಂದಿಗೆ ಬೆರೆತು ಸಮಸ್ಯೆಗೆ ಸ್ಪಂದಿಸುವ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಅವರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಥವಾ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷದ ಅಭ್ಯರ್ಥಿಯಾಗಿದ್ದರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿ ಸದಸ್ಯರಾದ ಕೃಷ್ಣಪ್ಪ, ಮುನಿರಾಜು, ಗೌತಮ್‌, ಜಿ.ನಾರಾಯಣಸ್ವಾಮಿ, ಆಂಜಿನಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !