ಬಿಜೆಪಿ ಸಾಮಾಜಿಕ ನ್ಯಾಯ ಪಾಲಿಸಿಲ್ಲ

ಶುಕ್ರವಾರ, ಏಪ್ರಿಲ್ 26, 2019
22 °C

ಬಿಜೆಪಿ ಸಾಮಾಜಿಕ ನ್ಯಾಯ ಪಾಲಿಸಿಲ್ಲ

Published:
Updated:

ಕೋಲಾರ: ‘ಕ್ಷೇತ್ರ ಶಾಂತಿಯಿಂದ ಇರಬೇಕಾದರೆ ಮತದಾರರು ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ನೀಡಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಯಪ್ಪ 7 ಬಾರಿ ಸಂಸದರಾಗಿದ್ದು, ಪ್ರತಿ ಸಮುದಾಯದ ವಿಶ್ವಾಸ ಗಳಿಸಿದ್ದಾರೆ. ಅವರಿಂದ ಕ್ಷೇತ್ರದ ಜನರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.

‘ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಬಿಬಿಎಂಪಿ ಕಾಡುಗೋಡಿ ವಾರ್ಡ್‌ನಲ್ಲಿ ರೋಲ್‌ಕಾಲ್ ಮುನಿಸ್ವಾಮಿ ಎಂದು ಕುಖ್ಯಾತಿ ಪಡೆದಿದ್ದಾರೆ. ಅವರು ಜನರಿಗೆ ದುಡ್ಡಿನ ಆಮಿಷವೊಡ್ಡಿ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರನ್ನು ಹಿಂದಿಟ್ಟುಕೊಂಡು ಕಾಡುಗೋಡಿಯಲ್ಲಿ ಶಾಂತಿ ಕದಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮುನಿಸ್ವಾಮಿ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಅವರ ಪೂರ್ವಾಪರ ತಿಳಿದ ಪಕ್ಷವು ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್‌ ಕೊಡಲಿಲ್ಲ. ನಂತರ ಬಿಜೆಪಿಗೆ ಕಾಡುಗೋಡಿ ವಾರ್ಡ್‌ನಲ್ಲಿ ಅಭ್ಯರ್ಥಿ ಸಿಗದ ಕಾರಣ ಮುನಿಸ್ವಾಮಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡಿತ್ತು. ಈಗ ಕ್ಷೇತ್ರದ ಜನರೆಲ್ಲಾ ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದು ಹೇಳಿದರು.

‘ಮುನಿಸ್ವಾಮಿ ವಿರುದ್ಧ ಸಾಕಷ್ಟು ಅಪರಾಧ ಪ್ರಕರಣ ದಾಖಲಾಗಿದ್ದು, ರೌಡಿಪಟ್ಟಿಯಲ್ಲೂ ಅವರ ಹೆಸರಿದೆ. ಖಾಲಿ ಜಮೀನುಗಳಿಗೆ ಕಾಂಪೌಂಡ್ ಹಾಕಿ ಮಾಲೀಕರನ್ನು ಬೆದರಿಸಿ ದೌರ್ಜನ್ಯ ಮಾಡಿದ್ದಾರೆ. ದಲಿತ ಸಂಘಟನೆ ಹೆಸರಿನಲ್ಲಿ ಆಟೊ ನಿಲ್ದಾಣ, ಕಚೇರಿಗಳಲ್ಲಿ ಹಣ ವಸೂಲಿ ಮಾಡಿ ಜನರನ್ನು ಬೆದರಿಸುತ್ತಿದ್ದಾರೆ’ ಎಂದು ದೂರಿದರು.

ಬಿಜೆಪಿ ಅಲೆಯಿಲ್ಲ: ‘ರಾಜ್ಯದಲ್ಲಿ ಬಿಜೆಪಿ ಅಲೆಯಿಲ್ಲ, ಇಲ್ಲಿನ ಇರುವುದು ಮೈತ್ರಿ ಅಲೆ ಮಾತ್ರ. ಬಿಜೆಪಿ ಅಭ್ಯರ್ಥಿಗಳು 5 ಸ್ಥಾನದಲ್ಲೂ ಗೆಲ್ಲುವುದಿಲ್ಲ. ಬಿಜೆಪಿಯು ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ಭೋವಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ’ ಎಂದು ಆರೋಪಿಸಿದರು.

ಬಿಬಿಎಂಪಿ ಸದಸ್ಯ ವೆಂಕಟೇಶಪ್ಪ, ಕಾಂಗ್ರೆಸ್‌ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !