ಶನಿವಾರ, ಆಗಸ್ಟ್ 13, 2022
24 °C
ಪಾದಯಾತ್ರೆಯಲ್ಲಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್‌ ಕಿಡಿ

ಕೇಂದ್ರ–ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ’ ಎಂದು ಸಂಯುಕ್ತ ಜನತಾದಳ (ಜೆಡಿಯು) ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಜೆ.ಪಟೇಲ್ ಕಿಡಿಕಾರಿದರು.

ಸಂಯುಕ್ತ ಜನತಾದಳ ಮತ್ತು ಜನತಾ ಪರಿವಾರದ ಸಹಯೋಗದಲ್ಲಿ ಕರ್ನಾಟಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್‌–19 ಸಂಕಷ್ಟದಿಂದ ಜನರ ಬದುಕು ಬರ್ಬರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದಿಂದ ಬೀದಿ ಪಾಲಾಗಿರುವ ಬಡ ಜನರಿಗೆ ಪರಿಹಾರ ಸಿಕ್ಕಿಲ್ಲ. ಜನ ಹಿತ ಕಡೆಗಣಿಸಿರುವ ಸರ್ಕಾರಗಳು ತುಘಲಕ್‌ ದರ್ಬಾರ್‌ ನಡೆಸುತ್ತಿವೆ’ ಎಂದು ಆರೋಪಿಸಿದರು.

‘ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಕೈ ಹಿಡಿಯಬೇಕಾದ ಸರ್ಕಾರ ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಜಾರಿಗೊಳಿಸಿದೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು, ರಾಜ್ಯವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಪಕ್ಷವು ಗ್ರಾಮ ಸ್ವರಾಜ್ ಅಭಿಯಾನ ಆರಂಭಿಸಿದೆ. ಅಭಿಯಾನದ ಮೂಲಕ ಮೂಲಕ ಸಧೃಡ ಗಾಮಗಳ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ. ಪಕ್ಷವು 3 ಹಂತದಲ್ಲಿ ಪಾದಯಾತ್ರೆ ನಡೆಸಲಿದ್ದು, ಮೊದಲ ಹಂತದಲ್ಲಿ ಕೋಲಾರದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುತ್ತೇವೆ’ ಎಂದರು.

ಸ್ವಾವಲಂಬಿ ಬದುಕು: ‘ಕರ್ನಾಟಕ ಕಲ್ಯಾಣ ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ವಾವಲಂಬಿ ಬದುಕು, ಪ್ರೀತಿಯ ವಾತಾವರಣ, ಶಾಂತಿ ಸೌಹಾರ್ದತೆ ಕಾಪಾಡುವುದು ಪಾದಯಾತ್ರೆಯ ಮುಖ್ಯ ಉದ್ದೇಶ. 2ನೇ ಹಂತದ ಪಾದಯಾತ್ರೆ ಅ.1ಕ್ಕೆ ಆರಂಭವಾಗುತ್ತದೆ. 3ನೇ ಹಂತದ ಪಾದಯಾತ್ರೆ ಕೂಡಲ ಸಂಗಮದವರೆಗೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಾದಯಾತ್ರೆ ಸಂಚರಿಸಲಿದೆ. ಪಕ್ಷಾತೀತವಾಗಿ ರೈತರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಬಹುದು’ ಎಂದು ಮಾಹಿತಿ ನೀಡಿದರು.

ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಲಕನ್ ಸುರೇಶ್, ಜಿಲ್ಲಾ ಘಟಕದ ಅಧ್ಯಕ್ಷ ಗಂಗರಾಜು, ಸದಸ್ಯರಾದ ಅನಂತ ಪದ್ಮನಾಭ ಪಾಲ್ಗೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು