ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಭಯದ ವಾತಾವರಣ ಸೃಷ್ಟಿಸಿದೆ: ಬಸವರಾಜ್ ವಾಗ್ದಾಳಿ

Last Updated 2 ಏಪ್ರಿಲ್ 2019, 14:26 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವ ಸಂಕಲ್ಪ ಮಾಡಬೇಕು’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ್ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಸಿಪಿಎಂ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ ಜಾತ್ಯತೀತ ಪಕ್ಷಗಳು ಅಧಿಕಾರಕ್ಕೆ ಬರುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಪ್ರಚಾರ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಎಡ ಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಿ ದೇಶದ ಭವಿಷ್ಯ ಬದಲಾಯಿಸುವ ಸರ್ಕಾರ ಅಧಿಕಾರಕ್ಕೆ ಬರಬೇಕು. ಪಕ್ಷದ 22ನೇ ಅಧಿವೇಶನದಲ್ಲಿ ಗುರುತಿಸಿರುವಂತೆ ಬಿಜೆಪಿಯು ಹಿಂದಿನ 5 ವರ್ಷಗಳಲ್ಲಿ ಜಾತ್ಯಾತೀತ ವ್ಯವಸ್ಥೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಿರಂತರವಾಗಿ ದಾಳಿ ಮಾಡಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ’ ಎಂದು ವಾಗ್ದಾಳಿ ನಡೆಸಿದರು.

‘ಹಿಂದಿನ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯು ಪ್ರಣಾಳಿಕೆಯಲ್ಲಿ ಸಾಕಷ್ಟು ಭರವಸೆ ನೀಡಿತ್ತು. ಬಿಜೆಪಿ ಮುಖಂಡರು 300ಕ್ಕೂ ಬಹಿರಂಗ ಸಭೆ ನಡೆಸಿ ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಬೊಬ್ಬೆ ಹಾಕಿದ್ದರು. ಆದರೆ, ಬಡವರು, ಕಾರ್ಮಿಕರಿಗೆ ಇಂದಿಗೂ ಒಳ್ಳೆಯ ದಿನಗಳು ಬರಲಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಅವಮಾನ ಮಾಡಿದೆ: ‘ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಇದಕ್ಕಾಗಿ ಜನಧನ್ ಯೋಜನೆಯಲ್ಲಿ ಸಾರ್ವಜನಿಕರು ಸಾಲುಗಟ್ಟೆ ನಿಂತು ಖಾತೆ ತೆರೆದರು. ಆದರೆ, ₹ 1 ಸಹ ಜನರ ಖಾತೆಗೆ ಬರಲಿಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕಪ್ಪು ಹಣದ ವಿಷಯವನ್ನು ಪ್ರಸ್ತಾಪಿಸುತ್ತಿಲ್ಲ’ ಎಂದು ಲೇವಡಿ ಮಾಡಿದರು.

‘ಕಪ್ಪು ಹಣದ ವಿಚಾರದಲ್ಲಿ ಬಿಜೆಪಿ ದೇಶದ ಜನರಿಗೆ ದೊಡ್ಡ ಅವಮಾನ ಮಾಡಿದೆ. ತಾನು ಭ್ರಷ್ಟಾಚಾರ ಮಾಡಲ್ಲ, ಜತೆಗೆ ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿದ್ದವರೂ ಅಧಿಕಾರಕ್ಕೆ ಬಂದು 5 ವರ್ಷವಾದರೂ ವಿದೇಶದಿಂದ ಕಪ್ಪು ಹಣ ತಂದಿಲ್ಲ. ಬಿಜೆಪಿ ನಾಯಕರಿಗೂ ಕಪ್ಪು ಹಣದ ಕುಳಗಳಿಗೂ ಇರುವ ಸಂಬಂಧ ಎಂತಹದು?’ ಎಂದು ಪ್ರಶ್ನಿಸಿದರು.

ಜನವಿರೋಧಿ ನೀತಿ: ‘ರೈತರಿಗೆ, ಕಾರ್ಮಿಕರಿಗೆ ಒಳ್ಳೆಯ ದಿನ ಬರುತ್ತವೆ ಎಂದವರು ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಬೆಂಬಲ ಬೆಲೆ ಮಾಡಿಲ್ಲ. ಇದರಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ಕೇಂದ್ರವು ರೈತರ ಸಾಲ ಮನ್ನಾ ಮಾಡದೆ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದೆ. ಬಂಡವಾಳಶಾಹಿಗಳ ಪರವಾಗಿರುವ ಬಿಜೆಪಿ ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಕಿಡಿಕಾರಿದರು.

‘ಪ್ರತಿ ವರ್ಷ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಅವರ ಭರವಸೆಯಂತೆ 5 ವರ್ಷದಲ್ಲಿ 10 ಕೋಟಿ ಉದ್ಯೋಗಾವಕಾಶ ಸೃಷ್ಟಿಯಾಗಬೇಕಿತ್ತು. ಆದರೆ, ಉದ್ಯೋಗದಲ್ಲಿದ್ದವರೇ ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ’ ಎಂದು ದೂರಿದರು.

‘ನೋಟು ಅಮಾನ್ಯೀಕರಣದಿಂದ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ ಎಂದು ಮೋದಿ ಹೇಳಿದ್ದರು. ಹಾಗಾದರೆ ಪುಲ್ವಾಮಾ ಘಟನೆಗೆ ಯಾರು ಹೊಣೆ? ಹಳೇ ನೋಟು ಬದಲಾವಣೆಗಾಗಿ ಬ್ಯಾಂಕ್‌ಗಳ ಮುಂದೆ ದಿನಗಟ್ಟಲೇ ಸಾಲುಗಟ್ಟಿ ನಿಂತು ಮೃತಪಟ್ಟ ಜನರಿಗೆ ಕನಿಷ್ಠ ಪರಿಹಾರ ಕೊಡದವರು ಈಗ ಯಾವ ಮುಖವಿಟ್ಟುಕೊಂಡು ಜನರ ಬಳಿ ಮತ ಕೇಳುತ್ತಾರೆ’ ಎಂದು ಹರಿಹಾಯ್ದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಪಿ.ಆರ್.ಸೂರ್ಯನಾರಾಯಣ, ಟಿ.ಎಂ.ವೆಂಕಟೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT