ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕನಸು ನನಸಾಗಿಸಲು ಬಿಜೆಪಿ ಬೆಂಬಲಿಸಿ: ಮುನಿಸ್ವಾಮಿ ಮನವಿ

Last Updated 24 ಏಪ್ರಿಲ್ 2019, 9:29 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದಲ್ಲಿ ಈ ಹಿಂದೆ ನಡೆದ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸು ಮಾಡಲು ಮತದಾರರು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮನವಿ ಮಾಡಿದರು.

ತಾಲ್ಲೂಕಿನ ಹಾರ್ಜೆನಹಳ್ಳಿ ಗ್ರಾಮದಲ್ಲಿ ಶನಿವಾರ ಕ್ಯಾಲನೂರು ಮಹಾಶಕ್ತಿ ಕೇಂದ್ರದ ಬೂತ್ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಮುನಿಯಪ್ಪರ ದುರಾಡಳಿತದಿಂದ ಬೇಸತ್ತಿರುವ ಕ್ಷೇತ್ರದ ಜನ ರಾಜಕೀಯ ಬದಲಾವಣೆ ಬಯಸಿದ್ದಾರೆ’ ಎಂದರು.

‘ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಫಲಿತಾಂಶ ಏನಾಗುತ್ತದೆ ಎಂದು ಮತದಾರರಲ್ಲಿ ಕುತೂಹಲ ಮನೆ ಮಾಡಿದೆ. ಕೋಲಾರ ಕ್ಷೇತ್ರಕ್ಕೆ ಪ್ರತ್ಯಕ್ಷವಾಗಿ ನಾನೇ ಬಿಜೆಪಿ ಅಭ್ಯರ್ಥಿ ಆಗಿರಬಹುದು. ಆದರೆ, ಪರೋಕ್ಷವಾಗಿ ಮೋದಿಯವರು ಈ ಕ್ಷೇತ್ರದ ಅಭ್ಯರ್ಥಿ. ಈವರೆಗಿನ ಕ್ಷೇತ್ರದ ರಾಜಕೀಯ ಪರಿಸ್ಥಿತಿ ತಿಳಿದಿರುವ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವ ತಪ್ಪು ಮಾಡಬಾರದು’ ಎಂದು ಹೇಳಿದರು.

‘ಈಗಾಗಲೇ ಹೋಬಳಿ ಮತ್ತು ಗ್ರಾಮ ಮಟ್ಟದ ಬೂತ್‌ಗಳಲ್ಲಿ ಯುವಕರು ಹಾಗೂ ಹಿರಿಯರು ಬಿಜೆಪಿ ಪರ ಧ್ವನಿ ಎತ್ತಿ ಮೋದಿಯವರ ಸಾಧನೆಗಳನ್ನು ಮನೆ ಮನೆಗೂ ತಿಳಿಸುತ್ತಿದ್ದಾರೆ. ಮೋದಿಯವರ ಅಲೆಯಲ್ಲಿ ಕಾಂಗ್ರೆಸ್‌ನ ಮುನಿಯಪ್ಪ ಕೊಚ್ಚಿ ಹೋಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಲು ಕಟ್ಟಿಟ್ಟ ಬುತ್ತಿ: ‘ಈ ಬಾರಿಯ ಲೋಕಸಭಾ ಚುನಾವಣೆಯು ಕ್ಷೇತ್ರದಲ್ಲಿ ಬಹಳ ಕುತೂಹಲಕಾರಿ ಸಂಗತಿ. ಸತತ 7 ಬಾರಿ ಗೆದ್ದಿರುವ ಮುನಿಯಪ್ಪ ಅವರು ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸುಳ್ಳು ಭರವಸೆ ನೀಡಿ ಗೆಲ್ಲುತ್ತಿರುವ ಅವರಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ ವಾಗ್ದಾಳಿ ನಡೆಸಿದರು.

‘ಮುನಿಯಪ್ಪ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡರು ಮೋದಿಯವರನ್ನು ಮತ್ತೆ ಪ್ರಧಾನಿಯಾಗಲು ಬಿಡಬರದೆಂದು ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ, ಶೇ 99ರಷ್ಟು ಯುವಕರು ಮತ್ತು ಹಿರಿಯರು ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಚಿಕ್ಕ ಮಕ್ಕಳು ಸಹ ಮೋದಿಯವರ ಹೆಸರು ಪಠಣ ಮಾಡುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಜಿ.ಅರುಣ್. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT