ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಕ್ತ ಕ್ಷೇತ್ರದ ಗುರಿ: ಬಿಜೆಪಿ ನೂತನ ಸಂಸದ ಮುನಿಸ್ವಾಮಿ

ಕಾರ್ಯಕರ್ತರ ಸಭೆ
Last Updated 24 ಮೇ 2019, 12:20 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ಕಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಜಿಲ್ಲೆಯ ವಿಪಕ್ಷಗಳ ಕೆಲ ಶಾಸಕರು ಸಹಕರಿಸುವುದಾಗಿ ಶುಭ ಸೂಚನೆ ಕೊಟ್ಟಿದ್ದಾರೆ’ ಎಂದು ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಮುಕ್ತವಾಗಿ ಮಾಡುವುದು ನನ್ನ ಗುರಿ. ಇದಕ್ಕೆ ಕಾರ್ಯಕರ್ತರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕ್ಷೇತ್ರವನ್ನು ಕಾಂಗ್ರೆಸ್‌ ಮುಕ್ತಗೊಳಿಸುತ್ತೇನೆ. ಕ್ಷೇತ್ರಕ್ಕೆ ಅಂಟಿರುವ ಶಾಪ ವಿಮೋಚನೆಗೊಳಿಸಬೇಕು. ಇದಕ್ಕೆ ಅವಕಾಶ ಕಲ್ಪಿಸಿರುವ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲಿದ್ದು, ವಿಪಕ್ಷಗಳ ಶಾಸಕರೇ ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಅವಕಾಶವಾದಿಗಳಿಗೆ ಪಕ್ಷದಲ್ಲಿ ಜಾಗವಿಲ್ಲ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಅವರ ರೀತಿ ಕೆಲಸ ಮಾಡದೆ ಇರುವವರನ್ನು ಅಧಿಕಾರದಿಂದ ದೂರ ಇಡುತ್ತೇವೆ’ ಎಂದರು.

‘ಕ್ಷೇತ್ರದ ಜನರ ಮೇಲೆ ನನಗೆ ಮೊದಲಿನಿಂದಲೂ ವಿಶ್ವಾಸವಿತ್ತು. ಇಲ್ಲಿನ ಮತದಾರರು ಎಂದಿಗೂ ದುಡ್ಡಿಗೆ ಆಸೆ ಪಟ್ಟವರಲ್ಲ. ಮುನಿಯಪ್ಪ ಅವರು 28 ವರ್ಷಗಳಿಂದ ಸಂಸದರಾಗಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರಿಗೆ ಅನ್ಯಾಯ ಮಾಡಿದ್ದರು. ಜನ ಇದರಿಂದ ಬೇಸತ್ತು ಚುನಾವಣೆಯಲ್ಲಿ ಮುನಿಯಪ್ಪರನ್ನು ಸೋಲಿಸಿ ವಿಶ್ರಾಂತಿ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಗೆಲುವಿಗೆ ವೇದಿಕೆ: ‘ಮುನಿಯಪ್ಪರ ವಿರೋಧಿಗಳಾದ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಎಂ.ಸಿ.ಸುಧಾಕರ್, ಮಂಜುನಾಥ್‌ಗೌಡ ಸೇರಿದಂತೆ ಅನೇಕರು ಪಕ್ಷಭೇದ ಮರೆತು ನನ್ನ ಗೆಲುವಿಗೆ ವೇದಿಕೆ ಸಿದ್ಧಪಡಿಸಿದರು. ಜತೆಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ಶ್ರಮಿಸಿದ್ದರಿಂದ 2 ಲಕ್ಷಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.

‘ಜನ ನನ್ನನ್ನು ಸಂಸದನಾಗಿ ಮಾಡಿ ಜವಾಬ್ದಾರಿ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜನರ ನಿರೀಕ್ಷೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಾಶ್ವತ ಅಭಿವೃದ್ಧಿ ಕೆಲಸ ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಯೋಜನೆ ರೂಪಿಸಿಕೊಳ್ಳಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ನಾಯಕತ್ವದ ಕೊರತೆ: ‘ಪಕ್ಷದಲ್ಲಿ ಯಾರು, ಏನು, ಹೇಗೆ ಎಂಬುದನ್ನು ಚುನಾವಣೆಯಲ್ಲಿ ಚೆನ್ನಾಗಿ ಅರಿತಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನಾಯಕತ್ವದ ಕೊರತೆಯಿದೆ. ಕಾರ್ಯಕರ್ತರು ಅವಕಾಶ, ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರೊಂದಿಗೆ ಚರ್ಚಿಸಿ ಕೆಲಸ ಮಾಡದವರ ಹುದ್ದೆ ಬದಲಾವಣೆಗೆ ಮನವಿ ಮಾಡುತ್ತೇನೆ’ ಎಂದು ವಿವರಿಸಿದರು.

‘ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದವರು ಯಾರು? ವಂಚಿಸಿದವರು ಯಾರು? ತಟಸ್ಥರಾದವರು ಯಾರು? ಎಲ್ಲವೂ ಗೊತ್ತಿದೆ. ಪಕ್ಷಕ್ಕೆ ದ್ರೋಹ ಬಗೆದವರು, ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡಿದವರು ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಕಾಪಾಡಬೇಕು’ ಎಂದು ಎಚ್ಚರಿಸಿದರು.

‘ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಮೇ 29ರಂದು ನಡೆಯುವ ಪುರಸಭೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕೆಲ ವಾರ್ಡ್‌ಗಳಲ್ಲಿ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಾನಮಾನ ಸಿಗಬೇಕು: ‘ಜನರ ವಿಶ್ವಾಸ ಗಳಿಸುವಂತಹ ಜನಪರ ಕೆಲಸ ಮಾಡಬೇಕು. ಕೇಂದ್ರದಲ್ಲಿ 5 ವರ್ಷ ನಮ್ಮದೇ ಸರ್ಕಾರವಿದ್ದರೂ ನಾಮನಿರ್ದೇಶನ ಮಾಡದೆ ಯಾರಿಗೂ ಯಾವುದೇ ಸ್ಥಾನಮಾನ ಸಿಗಲಿಲ್ಲ. ಸ್ಥಾನಮಾನ ಕೇಳುವವರು ಸಹ ಇರಲಿಲ್ಲ. ಈಗ ಮುನಿಸ್ವಾಮಿ ಅವರನ್ನು ಆಯ್ಕೆ ಮಾಡಿದ್ದು, ಅವರು ನಾಮನಿರ್ದೇಶನ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸ್ಥಾನಮಾನ ಸಿಗಬೇಕು’ ಎಂದು ಮಾಜಿ ಶಾಸಕ ಎ.ನಾಗರಾಜ್ ಸಲಹೆ ನೀಡಿದರು.

ಕನಸು ನನಸಾಗಿದೆ: ‘ಜಿಲ್ಲೆಯ ಬಹುದಿನದ ಕನಸು ಇದೀಗ ನನಸಾಗಿದೆ. ನರೇಂದ್ರ ಮೋದಿಯವರು ಬಿಜೆಪಿಯ ಶಕ್ತಿಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಪಕ್ಷಕ್ಕೆ ಬಹುಮತ ದೊರೆತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲಿ ಇದೇ ರೀತಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷಕ್ಕೆ ಚೈತನ್ಯ ತುಂಬಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಕಿವಿಮಾತು ಹೇಳಿದರು.

ಕ್ಷೇತ್ರದ ಉಸ್ತುವಾರಿ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಾಸುದೇವರೆಡ್ಡಿ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ, ನಗರದ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT