ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಕಾರ್ಯಗಳೇ ಬಿಜೆಪಿಗೆ ಶ್ರೀರಕ್ಷೆ

ಬಿಜೆಪಿಗೆ ಮತ್ತೆ ಅಧಿಕಾರ: ಪಕ್ಷದ ರಾಜ್ಯ ಪ್ರಬುದ್ಧರ ಪ್ರಕೋಷ್ಠ ಸಂಚಾಲಕ ರವಿ ವಿಶ್ವಾಸ
Last Updated 20 ಮೇ 2022, 14:00 IST
ಅಕ್ಷರ ಗಾತ್ರ

ಕೋಲಾರ: ‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಸರ್ಕಾರದ ಜನಪರ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆ’ ಎಂದು ಬಿಜೆಪಿ ರಾಜ್ಯ ಪ್ರಬುದ್ಧರ ಪ್ರಕೋಷ್ಠ ಸಂಚಾಲಕ ಎಸ್.ರವಿ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ವಿದೇಶಾಂಗ ನೀತಿ ಮತ್ತು ಸಾಧನೆಗಳ ಕುರಿತು ಬಿಜೆಪಿ ವತಿಯಿಂದ ಇಲ್ಲಿ ಶುಕ್ರವಾರ ಪ್ರಬುದ್ಧರ ಜತೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿ, ‘ಬಿಜೆಪಿಯು ಸರ್ಕಾರವು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪೂರಕವಾದ ಸಾಧನೆಗಳನ್ನು ಮಾಡಿದೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದರು.

‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. 2014ರ ಹಿಂದಿನ ವ್ಯವಸ್ಥೆ ಅವಲೋಕಿಸಿದರೆ 2008ರಲ್ಲಿ ಮುಂಬೈನ ತಾಜ್ ಹೋಟೆಲ್‍ನಲ್ಲಿ ಭಯೋತ್ಪಾದನಾ ದಾಳಿ ನಡೆಯಿತು. ದಾಳಿಯ ಪ್ರಮುಖ ಆರೋಪಿ ಖಸಬ್‌ನನ್ನು ಬಂಧಿಸಲಾಯಿತು. ಆ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ದೇಶದ ಸೈನಿಕರು ಮುಂದಾದರು. ಆದರೆ, ಯುಪಿಎ ಸರ್ಕಾರ ಓಟ್ ಬ್ಯಾಂಕ್ ಚದುರುತ್ತದೆ ಎಂಬ ಆತಂಕದಲ್ಲಿತ್ತು’ ಎಂದು ಕುಟುಕಿದರು.

‘ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಜಾಗತಿಕವಾಗಿ 29 ದೇಶದ ಪ್ರತಿನಿಧಿಗಳು ಪ್ರಧಾನಿ ಮೋದಿಯನ್ನು ಸಂಪರ್ಕಿಸಿ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದರು. ನಂತರ ಮೋದಿಯವರು ರಷ್ಯಾ ಅಧ್ಯಕ್ಷರ ಜತೆ ಚರ್ಚಿಸಿ ಯುದ್ಧ ಶಾಂತಗೊಳಿಸಿದರು. ಭಾರತ ಮತ್ತು ರಷ್ಯಾ ನಡುವೆ ಹಲವು ವರ್ಷಗಳ ಸಂಬಂಧವಿದೆ’ ಎಂದು ತಿಳಿಸಿದರು.

ಬಾಯಿ ಮುಚ್ಚಿಸಿದರು: ‘ಕೇಂದ್ರವು ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧದ ಸಂದರ್ಭದಲ್ಲಿ 22 ಸಾವಿರಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪರೇಶನ್‌ ಗಂಗಾ ಮೂಲಕ ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕರೆಸಿಕೊಂಡಿತು. 2019ರಲ್ಲಿ ಅಮೆರಿಕದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದವರನ್ನು ಆರೋಪ ಹೊರಿಸಿ ಬಂಧಿಸಲಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಅಮೆರಿಕವನ್ನು ಉಪಗ್ರಹಕ್ಕೆ ಹೊಲಿಕೆ ಮಾಡಿ ಮಾತನಾಡುತ್ತಿದ್ದರು. ವಿಶ್ವ ನಕ್ಷೆಯಲ್ಲಿ ಭಾರತವಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ, ಮೋದಿ ಟೀಕಾಕಾರರ ಬಾಯಿ ಮುಚ್ಚಿಸಿದರು’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷಕ್ಕೆ ಜಮ್ಮು ಮತ್ತು ಕಾಶ್ಮೀರವು ಓಟ್ ಬ್ಯಾಂಕ್ ಆಗಿತ್ತು. ದೇಶದ ರಕ್ಷಣೆ, ಅಭಿವೃದ್ಧಿಯೇ ಮೂಲ ಮಂತ್ರವಾಗಿರಬೇಕು ಎಂದು ವೀರ ಸಾವರ್ಕರ್ ಹೇಳಿದ್ದಾರೆ. ಮೋದಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಪರಿಣಾಮಕಾರಿ ಯೋಜನೆ ರೂಪಿಸಿ ಇದಕ್ಕೆ ಪೂರಕವಾಗಿ ಬೇರೆ ಬೇರೆ ದೇಶಗಳೊಂದಿಗೆ ಬಾಂಧವ್ಯ ವೃದ್ಧಿಯಾಗುವಂತೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘2014ಕ್ಕೂ ಮುನ್ನ ಹಿಂದೆ ನನ್ನ ದೇಶವೆಂಬ ಭಾವನೆ ಇರಲಿಲ್ಲ. ಮೋದಿ ಪಂಚ ಸೂತ್ರದಡಿ ವಿದೇಶಾಂಗ ನೀತಿ ಜಾರಿಗೆ ಮುಂದಾಗಿದ್ದಾರೆ. ಅವರು ಅಧಿಕಾರಕ್ಕೆ ಬಂದ ಮೇಲೆ ಸಾರ್ಕ್‍ನ 8 ದೇಶಗಳೊಂದಿಗೆ ಭಾರತ ಬಾಂಧವ್ಯ ಬೆಳೆಸಿಕೊಂಡಿತು. ಇದರಿಂದ ವ್ಯಾಪಾರ ಸಂಬಂಧ ಗಟ್ಟಿಗೊಂಡಿತು. ಮತ್ತೊಂದೆಡೆ ಚೀನಾ ಆರ್ಥಿಕ ವ್ಯವಸ್ಥೆ ಮೇಲೆ ದೊಡ್ಡ ಹೊಡೆತ ಬಿದ್ದಿತು. ಈಗ ಏನೇ ಸಮಸ್ಯೆ ಎದುರಾದರೂ ಚೀನಾ ಪಾಕಿಸ್ತಾನದ ಸಹಾಯ ಕೋರುತ್ತದೆ’ ಎಂದರು.

ದಾರಿ ತಪ್ಪಿಸುತ್ತಿದೆ: ‘ಪ್ರಪಂಚದಲ್ಲಿ ಶಾಂತಿ ಸ್ಥಾಪಿಸುವ ಸದುದ್ದೇಶದಿಂದ ಮೋದಿ ವಿದೇಶಾಂಗ ಸಂಬಂಧ ಬೆಳೆಸಿದ್ದಾರೆ. ಆಂತರಿಕ ವಿಷಯಗಳಿಂದ ದೂರ ಉಳಿದು ದೇಶದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ರಾಜಕೀಯ ದುರುದ್ದೇಶಕ್ಕೆ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಆರೋಪಿಸಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್‌, ಬಿಜೆಪಿ ಪ್ರಬುದ್ಧ ಪ್ರಕೋಷ್ಠದ ಸಹ ಸಂಚಾಲಕ ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT