ಭಾನುವಾರ, ಮೇ 29, 2022
23 °C
ಉದ್ಯೋಗ ಸೃಷ್ಟಿ ಭರವಸೆ ಹುಸಿ: ಶಾಸಕ ನಾರಾಯಣಸ್ವಾಮಿ ಲೇವಡಿ

ಜನರನ್ನು ಬೀದಿಗೆ ತಂದಿದ್ದೇ ಬಿಜೆಪಿ ಸಾಧನೆ: ಶಾಸಕ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದಿಂದ ಯಾರಿಗೆ ಒಳ್ಳೆ ದಿನಗಳು ಬಂದಿವೆ. ಪ್ರಚಾರಕ್ಕೆ ಸಾರ್ವಜನಿಕ ವೇದಿಕೆಗಳಲ್ಲಿ ಪೊಳ್ಳು ಭಾಷಣ ಮಾಡುವ ಬಿಜೆಪಿ ನಾಯಕರಿಗೆ ಈ ಬಗ್ಗೆ ಜನರು ಎದ್ದು ನಿಂತು ಪ್ರಶ್ನೆ ಮಾಡಬೇಕು’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಹುತ್ತೂರು ಹೋಬಳಿಯ ಅಬ್ಬಣಿ ಮತ್ತು ಹರಟಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಭಾಗವಾಗಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಬಿಜೆಪಿಯು 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ದೇಶದ ಪ್ರತಿ ವ್ಯಕ್ತಿಯ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಎಂದು ಹೇಳಿದ್ದ ಮೋದಿ ತಮ್ಮ ಮಾತು ಮರೆತಿದ್ದಾರೆ. ಜನರಿಗೆ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸಾಧನೆ ಎನು ಜನ ಪ್ರಶ್ನಿಸಬೇಕು. ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳನ್ನು ಮತ್ತಷ್ಟು ಶ್ರೀಮಂತರಾಗಿ ಮಾಡಿ ಜನಸಾಮಾನ್ಯರನ್ನು ಬೀದಿಗೆ ತಂದಿದ್ದೇ ಬಿಜೆಪಿ ಸಾಧನೆ’ ಎಂದು ಲೇವಡಿ ಮಾಡಿದರು.

‘ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷ ಅಧಿಕಾರದಲ್ಲಿತ್ತು, ತಮಗೆ ಕೇವಲ 60 ತಿಂಗಳು ಅಧಿಕಾರ ಕೊಟ್ಟರೆ ದೇಶಕ್ಕೆ ಒಳ್ಳೆಯ ದಿನಗಳು ಬರುತ್ತವೆ ಎಂದು ಮೋದಿ ಹೇಳಿದ್ದನ್ನು ಜನರು ಮರೆತಿಲ್ಲ. ಕಾಂಗ್ರೆಸ್ ಸಾಧನೆ ಏನೆಂದು ಪದೇಪದೇ ಕೇಳುವ ಮೋದಿ ಅವರು ದೇಶದ ಬಾವುಟದ ಸಂಕೇತ ನೋಡಿದರೆ ಗೊತ್ತಾಗುತ್ತದೆ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್‌ನ ಪಾತ್ರ, ಸಿದ್ದರಾಮಯ್ಯರ ಸರ್ಕಾರದ ಜನಪರ ಯೋಜನೆಗಳ ನೋಡಿದರೆ ಗೊತ್ತಾಗುತ್ತದೆ’ ಎಂದರು.

ಸಾಧನೆ ತಿಳಿಸಿ: ‘ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಗ್ರಾಮ ಸ್ವರಾಜ್ಯ ಹೆಸರಿನಲ್ಲಿ ಪ್ರತಿ ಗ್ರಾಮದ ಮತದಾರರಿಗೆ ತಿಳಿಸಬೇಕು. ಸಂವಿಧಾನ ರಚನೆಗೆ ಕಾಂಗ್ರೆಸ್‌ನ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸರ್ಕಾರದಲ್ಲಿ ಚರ್ಚೆಯಾಯಿತು ಎಂಬುದು ಇತಿಹಾಸ. ಸಂವಿಧಾನದ ಮೂಲಕವೇ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ಎಲ್ಲಾ ರಂಗದಲ್ಲಿ ಸಾಧನೆ ಮಾಡುವಂತಾಗಿದೆ. ಬಿಜೆಪಿಯಂತೆ ಕಾಂಗ್ರೆಸ್‌ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್ ಕುಟುಕಿದರು.

‘ಸ್ತ್ರೀಶಕ್ತಿ ಸಂಘಗಳನ್ನು ರಚಿಸಿ ಗ್ರಾಮಗಳಲ್ಲಿ ಸಮಸ್ಯೆಗಳ ಬಗ್ಗೆ ಮಾತಾಡುವಂತಾಗಿದೆ. ಜಿಲ್ಲೆಯ ಕಾಂಗ್ರೆಸ್ ಶಾಸಕರ ಮುತುವರ್ಜಿಯಿಂದ ಮತ್ತು ಕಾಂಗ್ರೆಸ್ ಸರ್ಕಾರದ ಡಿಸಿಸಿ ಬ್ಯಾಂಕ್‌ಗಳ ಮೂಲಕ ಮಹಿಳೆಯರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಗಳು ಅಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ಮತ್ತು ಯೋಜನೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡಿ’ ಎಂದು ಮಾಜಿ ಸಚಿವೆ ಮೋಟಮ್ಮ ಸೂಚಿಸಿದರು.

ಬಿಜೆಪಿ ದೂರವಿಡಿ: ‘ಗ್ರಾಮ ಸ್ವರಾಜ್ಯದ ಅಗತ್ಯಗಳನ್ನು ಜನರಿಗೆ ತಿಳಿಸುವ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕು. ರೈತರು, ದಲಿತರು, ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಗಾಂಧೀಜಿ ಏಕತ್ವ, ಭಗತ್ ಸಿಂಗ್ ಧೈರ್ಯ, ಅಂಬೇಡ್ಕರ್ ಸಮಾನತೆ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲಗೌಡ ಸಲಹೆ ನೀಡಿದರು.

ವಡಗೂರು ಗ್ರಾ.ಪಂ ಅಧ್ಯಕ್ಷ ರಾಜು, ಹರಟಿ ಗ್ರಾ.ಪಂ ಉಪಾಧ್ಯಕ್ಷ ನರೇಂದ್ರ ಬಾಬು, ಶಾಪೂರು ಗ್ರಾ.ಪಂ ಉಪಾಧ್ಯಕ್ಷ ಸಂಪತ್, ಕಾಂಗ್ರೆಸ್‌ ಮುಖಂಡರಾದ ರಾಜು ಶ್ರೀನಿವಾಸಪ್ಪ, ಪ್ರಕಾಶ್, ಮುನಿವೆಂಕಟಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.