ಬಿಜೆಪಿಯ ಹಿಂದುತ್ವ ವಿಚಾರ ಸವಕಲಾಗಿದೆ

7
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಟೀಕೆ

ಬಿಜೆಪಿಯ ಹಿಂದುತ್ವ ವಿಚಾರ ಸವಕಲಾಗಿದೆ

Published:
Updated:
Deccan Herald

ಕೋಲಾರ: ‘ಸಮಾಜದಲ್ಲಿ ಕೋಮುವಾದದ ವೈರಸ್ ತುಂಬಿರುವುದರಿಂದ ಜನ ವಿವೇಚನೆ ಕಳೆದುಕೊಳ್ಳುತ್ತಿದ್ದು, ಕೋಮುವಾದ ವಿರುದ್ಧದ ಹೋರಾಟ ಬಲಪಡಿಸಬೇಕಿದೆ’ ಎಂದು ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ನಡೆದ ‘ದೇಶ ಪ್ರೇಮವೋ ದೇಶ ದ್ರೋಹವೋ’ ಅನುವಾದಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ದೇಶದಲ್ಲಿ ಬಿಜೆಪಿಯು ಮೊದಲ ಬಾರಿ ಹಿಂದುತ್ವದ ಅಲೆ ಮೇಲೆ ಅಧಿಕಾರ ಹಿಡಿಯಿತು. 2014ರಲ್ಲಿ ಹಿಂದುತ್ವ, ಅಚ್ಛೇ ದಿನ್, ಗುಜರಾತ್ ಮಾದರಿಯ ಅಲೆಯಲ್ಲಿ ಅಧಿಕಾರಕ್ಕೆ ಬಂದಿತು’ ಎಂದರು.

‘ಹಿಂದುತ್ವದ ವಿಚಾರ ಸವಕಲಾದ ನಂತರ ಬಿಜೆಪಿ ಮುಖಂಡರು ರಾಮಮಂದಿರ, ಸಂವಿಧಾನದ 370ನೇ ಪರಿಚ್ಛೇದ ತಿದ್ದುಪಡಿ, ಸಮಾನ ನಾಗರಿಕ ಸಂಹಿತೆಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಆದರೆ, ಮುಂದಿನ 50 ವರ್ಷ ಬಿಜೆಪಿ ಅಧಿಕಾರಕ್ಕೆ ಬಂದರೂ ಇದ್ಯಾವುದೂ ಸಾಧ್ಯವಾಗದು’ ಎಂದು ಟೀಕಿಸಿದರು.

‘ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡಿದೆ. ಗುಜರಾತ್ ಮಾದರಿ ಟೊಳ್ಳು ಆಗಿದೆ. ಬಿಜೆಪಿ ಮುಖಂಡರಿಗೆ ಅಭಿವೃದ್ಧಿಯ ಪಟ್ಟಿ ನೀಡಲು ಆಗುವುದಿಲ್ಲ ಹೀಗಾಗಿ ದೇಶಪ್ರೇಮ, ರಾಷ್ಟ್ರೀಯತೆ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಸುಲಭದ ಕೆಲಸ: ‘ಇಂದು ದೇಶಭಕ್ತನಾಗುವುದು, ದೈವ ಭಕ್ತನಾಗುವುದು ಹಾಗೂ ರಾಜಕೀಯ ನಾಯಕನಾಗುವುದು ಬಹಳ ಸುಲಭದ ಕೆಲಸ. ದೇಶದ ಪರ ಘೋಷಣೆ ಕೂಗಿದರೆ ಸಾಕು ದೇಶಭಕ್ತನ ಸ್ಥಾನ ಸಿಗುತ್ತದೆ. ವಾಮ ಮಾರ್ಗದಲ್ಲಿ ಸಂಪಾದಿಸಿದ ಕಪ್ಪು ಹಣವನ್ನು ಪ್ರಾರ್ಥನಾ ಮಂದಿರಗಳಿಗೆ ನೀಡಿ ನಾಮಫಲಕದಲ್ಲಿ ಹೆಸರು ಹಾಕಿಸಿಕೊಂಡರೆ ದೈವಭಕ್ತ ಎನಿಸಿಕೊಳ್ಳುತ್ತಾನೆ. ನಾಯಕರ ಹುಟ್ಟಿದ ಹಬ್ಬಕ್ಕೆ ಫ್ಲೆಕ್ಸ್ ಹಾಕಿಸಿ ಕೈಯಲ್ಲಿ ಒಂದಿಷ್ಟು ಕಾಸು ಇಟ್ಟುಕೊಂಡು, ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ದೆಹಲಿ ನಾಯಕರ ಸಂಪರ್ಕ ಸಾಧಿಸಿದರೆ ರಾಜಕೀಯ ನಾಯಕನಾಗುತ್ತಾನೆ’ ಎಂದು ಮಾರ್ಮಿಕವಾಗಿ ನುಡಿದರು.

ಅಪಾಯಕಾರಿ: ‘ಸಮಾಜದಲ್ಲಿ ಅಭಿಪ್ರಾಯ ಇಲ್ಲದ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ವರ್ಗಗಳಿವೆ. ಅಭಿಪ್ರಾಯವನ್ನೇ ವ್ಯಕ್ತಪಡಿಸದ ವರ್ಗ ಅತ್ಯಂತ ಅಪಾಯಕಾರಿ. ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ದೌರ್ಜನ್ಯ, ದಾಳಿ ಆಗುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತಿಮ ದರ್ಶನಕ್ಕೆ ಬಂದಿದ್ದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಯತ್ನ ನಡೆಯುತ್ತದೆ ಎಂದರೆ ಕೋಮುಶಕ್ತಿಗಳು ಯಾವ ಮಟ್ಟಕ್ಕೆ ತಲುಪಿವೆ?’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್, ವಾಜಪೇಯಿ ಸೇರಿದಂತೆ ಸಂಘ ಪರಿವಾರದ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಅಂತಹವರು ಈಗ ದೇಶಪ್ರೇಮದ ಪಾಠ ಹೇಳುತ್ತಿರುವುದು ದೊಡ್ಡ ದುರಂತ. 700 ವರ್ಷಗಳ ಕಾಲ ದೇಶವನ್ನು ಆಳಿದ್ದ ಮುಸ್ಲಿಂ ದೊರೆಗಳು ಬ್ರಿಟೀಷರ ವಿರುದ್ದ ಮೊದಲು ಹೋರಾಟಕ್ಕಿಳಿದವರು. ಆದರೆ, ಇಂದು ಮುಸ್ಲಿಮರಿಗೆ ದೇಶದ್ರೋಹದ ಪಟ್ಟ ಕಟ್ಟುವ ಸಂಚು ನಡೆಯುತ್ತಿದೆ’ ಎಂದು ವಿಷಾದಿಸಿದರು.

ಸಂಘಟಿತ ಹೋರಾಟ: ‘ಬಿಜೆಪಿ ಹಾಗೂ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟ ಮಾಡಿದವರಲ್ಲ. ಅವರಲ್ಲಿ ದೇಶದ ನಾಯಕರಿಲ್ಲ. ಹೀಗಾಗಿ ಕೋಮುವಾದಿ ಶಕ್ತಿಗಳು ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್‌ರ ಫೋಟೊ ಇಟ್ಟುಕೊಂಡು ಹೊರಟಿವೆ. ಕೋಮುವಾದ ವಿರುದ್ಧದ ಹೋರಾಟವೆಂದರೆ ಯಾವುದೇ ಒಂದು ಧರ್ಮದ ವಿರುದ್ಧವಲ್ಲ. ಕೋಮುವಾದವು ಅಭಿವೃದ್ಧಿ ವಿರೋಧಿ, ಮಹಿಳೆ, ಬಡ ದಲಿತರ ವಿರೋಧಿಯಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ತನ್ನ ಗುರುವಿಗೆ ನಿಜವಾದ ಕಾಣಿಕೆ ನೀಡುವುದಾದರೆ ರಾಜಧರ್ಮ ಪಾಲಿಸುವಂತೆ ವಾಜಪೇಯಿ ಹೇಳಿದ್ದನ್ನು ಪಾಲಿಸಬೇಕಿತ್ತು. ಆ ಒಂದು ಮಾತು ಪಾಲಿಸಿದ್ದರೆ ದೇಶದ ಇಂದಿನ ಪರಿಸ್ಥಿತಿಯೇ ಬದಲಾಗುತ್ತಿತ್ತು. ವಾಜಪೇಯಿಯವರ ಹೆಸರನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದರು.

ಸಾಹಿತಿ ಬಿ.ಗಂಗಾಧರಮೂರ್ತಿ, ವಕೀಲ ಎನ್.ಅನಂತನಾಯ್ಕ್, ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಜಿಲ್ಲಾ ಘಟಕದ ಕಾರ್ಯದರ್ಶಿ ಆರ್.ವಿಜಯಕುಮಾರಿ, ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ಕೃತಿಯ ಅನುವಾದಕ ವಿಶ್ವ ಕುಂದಾಪುರ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !