ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಕೊರೊನಾ ಸೋಂಕಿನ ಭೀತಿ: ಜಿಲ್ಲೆಯಲ್ಲಿ ಕುಸಿದ ರಕ್ತ ಸಂಗ್ರಹಣೆ
Last Updated 31 ಮಾರ್ಚ್ 2020, 12:31 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕಿನ ಭೀತಿಯಿಂದಾಗಿ ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ವಿಶ್ವಮಾನವ ಕುವೆಂಪು ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್‌ ವತಿಯಿಂದ ನಗರದ ಎಸ್‌ಎನ್ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ರಕ್ತದಾನ ಶಿಬಿರ ನಡೆಸಲಾಯಿತು.

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ದಿಗ್ಬಂಧನ ಘೋಷಿಸಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಸಾರ್ವಜನಿಕರು ರಕ್ತದಾನ ಮಾಡಲು ಮನೆಗಳಿಂದ ಹೊರ ಬರುತ್ತಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತದ ಕೊರತೆ ಸೃಷ್ಟಿಯಾಗಿದೆ.

ಈ ಸಮಸ್ಯೆ ಅರಿತ ವಿಶ್ವಮಾನವ ಕುವೆಂಪು ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್‌ ರಕ್ತದಾನ ಶಿಬಿರ ನಡೆಸಿತು. ಶಿಬಿರದಲ್ಲಿ 10ಕ್ಕೂ ಹೆಚ್ಚು ಮಂದಿ ಸ್ವಪ್ರೇರಣೆಯಿಂದ ರಕ್ತದಾನ ಮಾಡಿದರು. ಟ್ರಸ್ಟ್‌ ಪ್ರತಿ 2 ದಿನಕ್ಕೊಮ್ಮೆ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಸಲು ನಿರ್ಧರಿಸಿದೆ.

‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ರಕ್ತನಿಧಿ ಕೇಂದ್ರಗಳು ಬಂದ್ ಆಗಿರುವುದರಿಂದ ರಕ್ತದ ಅಭಾವ ಸೃಷ್ಟಿಯಾಗಿದೆ. ಇದರಿಂದ ಗರ್ಭಿಣಿಯರು, ಅಪಘಾತದ ಗಾಯಾಳುಗಳ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜನರ ಹಿತದೃಷ್ಟಿಯಿಂದ 2 ದಿನಕ್ಕೊಮ್ಮೆ ರಕ್ತದಾನ ಶಿಬಿರ ನಡೆಸುತ್ತೇವೆ. ಸಾರ್ವಜನಿಕರು ರಕ್ತದಾನ ಮಾಡಿ ಜನರ ಪ್ರಾಣ ಉಳಿಸಬೇಕು’ ಎಂದು ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್ ಮನವಿ ಮಾಡಿದರು.

ಊಟ ವಿತರಣೆ: ಶಿಬಿರದ ಬಳಿಕ ಟ್ರಸ್ಟ್‌ ಸದಸ್ಯರು ನಗರದ ಡೂಂಲೈಟ್ ವೃತ್ತ, ಕ್ಲಾಕ್‌ಟವರ್, ಗಾಂಧಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ವೃತ್ತ, ಟೇಕಲ್ ರಸ್ತೆ, ಕೆಎಸ್‌ಆರ್‌ಟಿಸಿ ಡಿಪೋ ರಸ್ತೆಯಲ್ಲಿನ ನಿರ್ಗತಿಕರು, ವಯೋವೃದ್ಧರು, ಅನಾಥರು, ಕೂಲಿ ಕಾರ್ಮಿಕರು ಹಾಗೂ ಭಿಕ್ಷುಕರಿಗೆ ಊಟ ವಿತರಿಸಿದರು.

‘ಕೋವಿಡ್‌–19 ರೋಗದಿಂದ ಇಡೀ ವಿಶ್ವ ತಲ್ಲಣಗೊಂಡಿದೆ. ಕೊರೊನಾ ಸೋಂಕಿನ ತಡೆಗಾಗಿ ಶ್ರಮಿಸುತ್ತಿರುವ ಸರ್ಕಾರ ಹಾಗೂ ಅಧಿಕಾರಿ ವರ್ಗಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ವಿನಾಕಾರಣ ಮನೆಯಿಂದ ಹೊರ ಬರಬಾರದು. ಸೋಂಕು ಹರಡುವಿಕೆ ತಡೆಗಾಗಿ ದಿಗ್ಬಂಧನದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಿಗ್ಬಂಧನದ ಅವಧಿ ಮುಗಿಯುವವರೆಗೂ ಜಿಲ್ಲೆಯ ಬಡ ಜನರಿಗೆ ಟ್ರಸ್ಟ್‌ನಿಂದ ಆಹಾರ ವಿತರಿಸುತ್ತೇವೆ’ ಎಂದು ನಾಗರಾಜ್‌ ಹೇಳಿದರು.

ಟ್ರಸ್ಟ್‌ನ ಸದಸ್ಯರಾದ ಆದರ್ಶ, ಎಸ್.ಕೆ.ಗುರು, ಹೇಮಂತ್, ಲೋಕೇಶ್, ಸೋಮು, ಹರೀಶ್‌ಕುಮಾರ್‌, ಎಸ್.ಜಿ.ಇಮ್ರಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT