ಮಂಗಳವಾರ, ಜನವರಿ 18, 2022
27 °C
ನೊಂದ ಕುಟುಂಬಗಳ ಜತೆ ಸರ್ಕಾರವಿದೆ

ಜೀವನದ ಸವಾಲನ್ನು ಧೈರ್ಯವಾಗಿ ಎದುರಿಸಿ- ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತದೆ. ನೊಂದ ಕುಟುಂಬಗಳ ಜತೆ ಸರ್ಕಾರದ್ದು, ಜೀವನದ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರದ ಚೆಕ್‌ ವಿತರಿಸಿ ಮಾತನಾಡಿ, ‘ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರೂ ಆ ಕುಟುಂಬಕ್ಕೆ ಜೀವನ ಪರ್ಯಂತ ನೋವು ತಪ್ಪಿದ್ದಲ್ಲ. ಆದರೂ ಸಾವಿಲ್ಲದ ಮನೆಯಿಲ್ಲ. ಸಾವು ಸೃಷ್ಟಿ ನಿಯಮ. ಪ್ರತಿಯೊಬ್ಬರೂ ಧೈರ್ಯದಿಂದ ಜೀವನ ಮಾಡಬೇಕು’ ಎಂದರು.

‘ಕಳೆದುಕೊಂಡ ಕುಟುಂಬದ ಸದಸ್ಯರನ್ನು ಮರಳಿ ಪಡೆಯುವುದು ಅಸಾಧ್ಯ. ಆದರೆ, ಕುಟುಂಬದ ನೋವು ಕಡಿಮೆ ಮಾಡಲು ಹಾಗೂ ಕುಟುಂಬದ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಪ್ರತಿ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡುತ್ತಿದೆ. ಈ ಕಾರ್ಯಕ್ರಮ ಸಂತಸ ಪಡುವಂತದ್ದಲ್ಲ. ಇಂತಹ ಕಾರ್ಯಕ್ರಮ ಮರುಕಳಿಸಬಾರದು. ಈ ನಿಟ್ಟಿನಲ್ಲಿ ನಾವೆಲ್ಲಾ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಪ್ರತಿ ಸಂದರ್ಭದಲ್ಲಿ ನಾವು ನಿಮ್ಮೊಂದಿಗೆ ಇರುತ್ತೇವೆ. ಯಾವುದೇ ಸಮಯದಲ್ಲಿ ನಮ್ಮನ್ನು ಭೇಟಿಯಾಗಿ. ಆಸರೆ ಕಳೆದುಕೊಂಡ ನಿಮ್ಮೊಂದಿಗೆ ಸಹೋದರರಾಗಿ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 427 ಮಂದಿಯ ಕುಟುಂಬಕ್ಕೆ ಪರಿಹಾರ ನೀಡಬೇಕಿದ್ದು, ಕೇಂದ್ರ ಸರ್ಕಾರವು 107 ಕುಟುಂಬಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ ಮಾಡಿದೆ. ಉಳಿದ 320 ಕುಟುಂಬಗಳ ಪೈಕಿ 224 ಕುಟುಂಬಗಳಿಗೆ ಚೆಕ್ ಮೂಲಕ ಪರಿಹಾರ ವಿತರಿಸಲಾಗುತ್ತಿದೆ, ಉಳಿದ ಕುಟುಂಬಗಳಿಗೂ ಸದ್ಯದಲ್ಲಿ ಪರಿಹಾರ ನೀಡಲಾಗುವುದು’ ಎಂದು ವಿವರಿಸಿದರು.

400ಕ್ಕೂ ಹೆಚ್ಚು ಸಾವು: ‘ಕೋವಿಡ್‌ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಮನದಲ್ಲಿ ದುಃಖ ಮನೆ ಮಾಡಿದೆ. ಕೋವಿಡ್‌ 2 ಅಲೆಗಳ ಬಳಿಕ ಇದೀಗ ಮೂರನೇ ಅಲೆ ಆರಂಭವಾಗಿದೆ. 2 ಅಲೆಗಳಲ್ಲಿ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸಬೇಕು. ಕೋವಿಡ್ ತಡೆಗೆ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.

‘ಕೋವಿಡ್‌ ಲಸಿಕೆ ಗುರಿ ಸಾಧನೆಯಲ್ಲಿ ಜಿಲ್ಲೆಯು ಬೆಂಗಳೂರಿನ ನಂತರದ ಸ್ಥಾನದಲ್ಲಿದೆ. ಲಸಿಕೆ ವಿಚಾರದಲ್ಲಿ ರಾಜಕಾರಣ ಬೇಡ. 2ನೇ ಅಲೆ ವೇಳೆ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ತಡವಾಗಿದ್ದರಿಂದ ಹಲವರು ಜೀವ ತೆತ್ತರು. ಭವಿಷ್ಯದಲ್ಲಿ ಈ ರೀತಿ ಆಗಬಾರದು. ಕುಟುಂಬ, ಗ್ರಾಮಗಳ ರಕ್ಷಣೆ ನಮ್ಮ ಕೈಯಲ್ಲಿದೆ. ಎಲ್ಲರೂ ಸುರಕ್ಷತೆಗೆ ಹೆಚ್ಚು ಒತ್ತು ಕೊಡೋಣ’ ಎಂದು ಸಲಹೆ ನೀಡಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವು ಕೈಗಾರಿಕೆಗಳು, ಸಂಘ ಸಂಸ್ಥೆಗಳು, ಸಮಾಜ ಸೇವಕರು ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ 60ರಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ಸೂಚಿಸಿದರು.

ಕೋವಿಡ್ ವೇಳೆ ಸೇವೆ ಸಲ್ಲಿಸಿದ ಕೈಗಾರಿಕೆಗಳ ಮುಖ್ಯಸ್ಥರು, ಸಮಾಜ ಸೇವಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ.ಸಂಪಂಗಿ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ತಹಶೀಲ್ದಾರ್‌ಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು