ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಲ್ಲಿ ತ್ರಿಭಾಷಾ ಸಂಗಮ: ಆಡು ನುಡಿ ತೆಲುಗು– ಬದುಕು ಕನ್ನಡ

Last Updated 25 ಅಕ್ಟೋಬರ್ 2019, 10:09 IST
ಅಕ್ಷರ ಗಾತ್ರ

ಕೋಲಾರ: ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ರಾಜ್ಯದ ಗಡಿ ಜಿಲ್ಲೆ ಕೋಲಾರವು ತ್ರಿಭಾಷಾ ಸಂಗಮ. ಇಲ್ಲಿನ ಜನರ ಆಡು ನುಡಿ ಹಾಗೂ ವ್ಯಾವಹಾರಿಕ ಭಾಷೆ ತೆಲುಗಾದರೂ ಬದುಕು ಕನ್ನಡ.

ಜಿಲ್ಲೆಯು ಭೌಗೋಳಿಕವಾಗಿ ಕನ್ನಡ ನಾಡಿನಲ್ಲಿದ್ದರೂ (ಕರ್ನಾಟಕ) ತೆಲುಗು ಭಾಷೆಯು ಜನ ಜೀವನದ ಭಾಗವಾಗಿದೆ. ಕೆಜಿಎಫ್‌ ಸುತ್ತಮುತ್ತ ತಮಿಳು ಭಾಷೆಯದೇ ಪಾರುಪತ್ಯ. ಅನ್ಯ ಭಾಷೆಗಳ ಪ್ರಭಾವ ಹೆಚ್ಚಿದ್ದರೂ ಜಿಲ್ಲೆಯು ಭಾಷಾ ಸಾಮರಸ್ಯಕ್ಕೆ ಹೆಸರಾಗಿದೆ.

ಕರ್ನಾಟಕ ಏಕೀಕರಣಕ್ಕೂ ಮುನ್ನ ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭದಲ್ಲಿ ಜನಾಭಿಪ್ರಾಯ ಸಂಗ್ರಹ ನಡೆದಾಗ ಜಿಲ್ಲೆಯ ಜನ ‘ಮಾಕಿ ಕನ್ನಡಂ ಕಾವಲಿ’ (ನಮಗೆ ಕನ್ನಡ ಬೇಕು) ಎಂದು ತೆಲುಗಿನಲ್ಲೇ ಹೇಳಿದ್ದು ಭಾಷಾ ಔದಾರ್ಯಕ್ಕೆ ಸಾಕ್ಷಿ.

ಸರ್ಕಾರಿ ಕಚೇರಿಗಳಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದರೂ ಕಚೇರಿಗೆ ಬರುವ ಜನರಿಗೆ ತೆಲುಗು ಅಚ್ಚುಮೆಚ್ಚು. ಅಧಿಕಾರಿಗಳ ಜತೆ ನಿರರ್ಗಳವಾಗಿ ತೆಲುಗಿನಲ್ಲಿ ಮಾತನಾಡುವ ಜನ ಮನೆಯಲ್ಲೂ ಅದೇ ಭಾಷೆಯಲ್ಲಿ ಸಂವಹನ ನಡೆಸುತ್ತಾರೆ. ಮನೆಯಿಂದ ಮಾರುಕಟ್ಟೆವರೆಗೆ ಸಕಲವೂ ತೆಲುಗುಮಯ. ಶ್ರೀನಿವಾಸಪುರ ಭಾಗದಲ್ಲಂತೂ ತೆಲುಗು ಪ್ರಭಾವ ಗಾಢವಾಗಿದೆ.

ಸಹೋದರ ಭಾಷೆಗಳಾದ ತೆಲುಗು ಮತ್ತು ತಮಿಳು ಇಲ್ಲಿ ಕನ್ನಡಕ್ಕೆ ಶತ್ರುವಲ್ಲ. 3 ಭಾಷೆಗಳ ತ್ರಿವೇಣಿ ಸಂಗಮವಾದ ಜಿಲ್ಲೆಯಲ್ಲಿ ಭಾಷಾ ಸಮಸ್ಯೆಯೂ ಇಲ್ಲ. ಜನ ಭಾಷಾಂಧತೆ ಬೆಳೆಸಿಕೊಂಡಿಲ್ಲ. ಭಾಷೆ ಹೆಸರಿನಲ್ಲಿ ಎಂದಿಗೂ ಸಂಘರ್ಷ ನಡೆದಿಲ್ಲ. ಮನೆಗಳಲ್ಲಿ ಮತ್ತು ದೈನಂದಿನ ವ್ಯವಹಾರದಲ್ಲಿ ಹೆಚ್ಚಾಗಿ ತೆಲುಗು ಬಳಸುತ್ತಿದ್ದರೂ ಜನರ ಮನಸ್ಸು ಕನ್ನಡಮಯವಾಗಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ತೆಲುಗು ಶಾಲೆಗಳಿಲ್ಲ. ತೆಲುಗು ಶಾಲೆ ಬೇಕೆಂದು ಹೋರಾಟ ಮಾಡಿದ ನಿದರ್ಶನವಿಲ್ಲ.

ಸಿನಿಮಾ ಸವಾಲು: ಜಿಲ್ಲೆಯ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಒಂದು ವಾರವಿದ್ದರೆ ಅದೇ ದೊಡ್ಡ ಸಾಧನೆ. ವರನಟ ರಾಜ್‌ಕುಮಾರ್‌ ಅಭಿನಯದ ಸಾಕಷ್ಟು ಸಿನಿಮಾಗಳು ಶತ ದಿನೋತ್ಸವ ಆಚರಿಸಿವೆ. ಜಿಲ್ಲೆಯ ಮಟ್ಟಿಗೆ ಕನ್ನಡ ಸಿನಿಮಾಗಳ ವೈಭವದ ದಿನಗಳು ರಾಜ್‌ಕುಮಾರ್‌ ಕಾಲಕ್ಕೆ ಅಂತ್ಯಗೊಂಡಿವೆ. ನವೆಂಬರ್‌ನಲ್ಲಿ ಮಾತ್ರ ಕರ್ನಾಟಕ ರಾಜ್ಯೋತ್ಸವದ ಕಾರಣಕ್ಕೆ ತಿಂಗಳಿಡೀ ಕನ್ನಡ ಸಿನಿಮಾ ಪ್ರದರ್ಶಿಸಲಾಗುತ್ತದೆ. ಉಳಿದಂತೆ ವರ್ಷವಿಡೀ ಬಹುತೇಕ ಚಿತ್ರಮಂದಿರಗಳಲ್ಲಿ ತೆಲುಗು ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ.

ಜಿಲ್ಲೆಯಲ್ಲಿ ಕಳೆದೆರಡು ದಶಕದಲ್ಲಿ ಕನ್ನಡದ ಯಾವುದೇ ಸಿನಿಮಾ 50 ದಿನಗಳ ಪ್ರದರ್ಶನ ಕಂಡಿಲ್ಲ. ಜನರು ಪ್ರಭಾಸ್‌, ಚಿರಂಜೀವಿ, ಮಹೇಶ್‌ಬಾಬು, ಪವನ್‌ ಕಲ್ಯಾಣ್‌, ಜೂನಿಯರ್‌ ಎನ್‌ಟಿಆರ್‌, ನಾಗಾರ್ಜುನ್‌ರ ಹುಚ್ಚು ಅಭಿಮಾನಿಗಳಾದರೂ ನೆಲ, ಜಲ, ಭಾಷೆ ವಿಚಾರ ಬಂದಾಗ ಆ ನಟರೆಲ್ಲಾ ತೆಲುಗು ಭಾಷಿಕರು, ಜನರೆಲ್ಲಾ ಕನ್ನಡಿಗರು.

ಶಾಲೆಗೆ ಆಂಧ್ರ ಮಕ್ಕಳು: ಜಿಲ್ಲೆಯಲ್ಲಿ ಕನ್ನಡ ಅಕ್ಷರ ಬಲ್ಲವರೆಲ್ಲರೂ ತೆಲುಗು ಓದಬಲ್ಲರು. ಕನ್ನಡ ಭಾಷೆಯಲ್ಲಿ ತೆಲುಗು ಪದಗಳು, ತೆಲುಗು ಭಾಷೆಯಲ್ಲಿ ಕನ್ನಡದ ಪದಗಳು ಹಾಲು ಜೇನಿನಂತೆ ಸೇರಿ ಹೋಗಿವೆ. ತೆಲುಗು ಮಿಶ್ರಿತ ಕನ್ನಡ ಹಾಗೂ ಕನ್ನಡ ಮಿಶ್ರಿತ ತೆಲುಗು ಜನರ ನಾಲಿಗೆ ಮೇಲೆ ನಲಿದಾಡುತ್ತದೆ.

ಜಿಲ್ಲೆಯ ಗಡಿ ಭಾಗದ ಕನ್ನಡದ ಶಾಲೆಗಳಲ್ಲಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಮಕ್ಕಳು ಕಲಿಯುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಮಕ್ಕಳು ಆಂಧ್ರ, ತಮಿಳುನಾಡಿನ ಗಡಿಯಂಚಿನ ಶಾಲೆಗಳಲ್ಲಿ ಓದುತ್ತಿದ್ದಾರೆ.

ತೆಲುಗು ಭಾಷಣ: ಶ್ರೀನಿವಾಸಪುರ ಭಾಗದಲ್ಲಿ ತೆಲುಗಿನಲ್ಲಿ ಭಾಷಣ ಮಾಡದ ಜನಪ್ರತಿನಿಧಿಗಳಿಗೆ ಮತದಾರರ ಹೃದಯದಲ್ಲಿ ಜಾಗವಿಲ್ಲ. ಭಾಷಣ ಸಂಪೂರ್ಣ ಕನ್ನಡಮಯವಾದರೆ ಜನ ಅರ್ಧದಲ್ಲೇ ಜಾಗ ಖಾಲಿ ಮಾಡುತ್ತಾರೆ. ಈ ಸತ್ಯ ಅರಿತಿರುವ ಜನಪ್ರತಿನಿಧಿಗಳು ಕನ್ನಡದಲ್ಲಿ ಭಾಷಣ ಆರಂಭಿಸಿ ತೆಲುಗಿನಲ್ಲಿ ಅಂತ್ಯಗೊಳಿಸುತ್ತಾರೆ.

ಭಾಷೆ ಹಾಗೂ ಭೌಗೋಳಿಕತೆಯ ಗಡಿ ಮೀರಿ ವೈವಾಹಿಕ ಸಂಬಂಧಗಳು ಬೆಳೆದಿವೆ. ಜಿಲ್ಲೆಯವರು ಆಂಧ್ರದ ಹೆಣ್ಣನ್ನು ವರಿಸುವುದು, ಅಲ್ಲಿಯವರು ಇಲ್ಲಿಯವರನ್ನು ಮದುವೆಯಾಗುವುದು ಹಿಂದಿನಿಂದಲೂ ನಡೆದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT