ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿವಿಯಲ್ಲೊಂದು ಹಳ್ಳಿಮನೆ

ಎಸ್‍ವಿಪಿ ಕನ್ನಡ ವಿಭಾಗದಲ್ಲಿ ಸಾಂಪ್ರದಾಯಿಕ ದಿನ
Last Updated 21 ಮೇ 2018, 10:08 IST
ಅಕ್ಷರ ಗಾತ್ರ

ಇತ್ತೀಚೆಗೆ ಹೆಚ್ಚಿನ ಎಲ್ಲಾ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾನಿಲಯದ ವಿವಿಧ ವಿಭಾಗದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದಲ್ಲಿ ಒಂದು ದಿನವನ್ನು ಸಾಂಪ್ರದಾಯಿಕ ದಿನವನ್ನಾಗಿ ಆಚರಿಸುತ್ತಿರುವುದು ಸಾಮಾನ್ಯ. ಹುಡುಗರು ಸಾಂಪ್ರದಾಯಿಕ ಉಡುಪುಗಳಲ್ಲಿ ಕಂಡುಬಂದರೆ ಹುಡುಗಿಯರು ಸಾಂಪ್ರದಾಯಿಕವಾಗಿ ಸೀರೆಯನ್ನುಟ್ಟು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ್ನು ನೀಡಿ ಈ ಸಾಂಪ್ರದಾಯಿಕ ದಿನವನ್ನು ಆಚರಿಸುತ್ತಾರೆ. ಆದರೆ ಇದಕ್ಕೆ ತೀರ ವಿಭಿನ್ನವಾಗಿ ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನವನ್ನು ದೇಸಿ ಹಬ್ಬವನ್ನಾಗಿ ವೈಶೀಷ್ಟ್ಯಪೂರ್ಣವಾಗಿ ಆಚರಿಸಿದರು.

ಕನ್ನಡ ಅಧ್ಯಯನ ವಿಭಾಗದ ಮದ್ಯಭಾಗದ ಸಮತಟ್ಟಾದ ಜಾಗದಲ್ಲಿ ಭತ್ತ, ರಾಗಿಯ ಗದ್ದೆ, ಗುಡಿಸಲು ಮನೆ, ಕೃಷಿಗೆ ಬಳಸುವ ಸಾಂಪ್ರದಾಯಿಕ ಉಪಕರಣಗಳು, ಪಂಚಭೂತದ ಆರಾಧನೆಯ ಕಂಬ, ಹಳ್ಳಿಯ ಬಾವಿ, ಗ್ರಾಮೀಣ ಕ್ರೀಡೆಗಳು ಹೀಗೆ ಗ್ರಾಮೀಣ ಹಳ್ಳಿಯ ವಾತಾವರಣವು ಅಲ್ಲಿ ಪುನರ್‌ ನಿರ್ಮಾಣಗೊಂಡಿತ್ತು.

ಒಂದು ತಿಂಗಳ ಹಿಂದಿನಿಂದಲೇ ಕನ್ನಡದ ವಿದ್ಯಾರ್ಥಿಗಳು ಇದಕ್ಕೆ ಪೂರ್ವತಯಾರಿಯನ್ನು ನಡೆಸಿದ್ದರು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ತರಗತಿ ಆದ ಬಳಿ ವಿಭಾಗದ ಮಧ್ಯ   ಭಾಗದಲ್ಲಿರುವ ಖಾಲಿ ಜಾಗದಲ್ಲಿ ಗದ್ದೆಯನ್ನು ನಿರ್ಮಿಸುವುದಕ್ಕೋಸ್ಕರವಾಗಿ ಗಟ್ಟಿ ಮಣ್ಣನ್ನು ಅಗೆದು ಹದಗೊಳಿಸಿದರು. ಹದಗೊಳಿಸಿದ ಬಳಿಕ ನೀರಿನ ವ್ಯವಸ್ಥೆಯನ್ನು ಮಾಡಿ ಗದ್ದೆಯಲ್ಲಿ ಭತ್ತ, ರಾಗಿ, ಶೇಂಗ, ಹೆಸರು ಮೊದಲಾದ ಬೆಳೆಗಳ ಬೀಜಗಳನ್ನು ಬಿತ್ತಲಾಯಿತು. ಗದ್ದೆಯ ಬಳಿಯ ಒಂದು ಭಾಗದಲ್ಲಿ ಒಣಮೆ ಗುಡಿಸಲು, ಕಾವಲು ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ ಒಂದು ಬದಿಂಯಲ್ಲಿ ಜೋಕಾಲಿಯನ್ನು ನಿರ್ಮಿಸಿ ಅದನ್ನು ಶೃಂಗರಿಸಲಾಗಿತ್ತು. ಅಲ್ಲದೆ ನಮ್ಮ ಮೂಲನಿವಾಸಿಗಳ ಪ್ರಕೃತಿ ಆರಾಧನೆಯನ್ನು ನೆನಪಿಸುವ ಪಂಚಭೂತದ ಆರಾಧನೆಯ ಕಂಬವನ್ನು ನೆಡಲಾಗಿತ್ತು. ಹಿಂದೆ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಗಳಿಗೆ ಬಳಸುತ್ತಿದ್ದ ಮೂಲ ಪರಿಕರಗಳನ್ನು ಗದ್ದೆಯ ಒಂದು ಬದಿಯಲ್ಲಿ ಜೋಡಿಸಲಾಗಿತ್ತು. ವಿಭಾಗದ ಮುಂಭಾಗದಲ್ಲಿ ಅನೇಕ ರೀತಿಯಲ್ಲಿ ಕೈಕುಸುರಿಯಿಂದ ಮಾಡಿದ ಆಕರ್ಷಣೀಯ ವಸ್ತುಗಳನ್ನು ಜೋಡಿಸಿಡಲಾಗಿತ್ತು. ಜೊತೆಗೆ ಬಾಲ್ಯದಲ್ಲಿ ಆಡಿದಂತಹ ಗ್ರಾಮೀಣ ಕ್ರೀಡೆಗಳಾದ ಹುಲಿಮನೆ ಆಟ, ಮರಕೋತಿ ಆಟ, ಲಗೋರಿ, ಬುಗುರಿ, ಚಾಕಬಾರು, ಪಗಡೆ, ಕಬಡ್ಡಿ, ಬರ್ಜಿ ಎಸೆತ ಮೊದಲಾದ ಕ್ರೀಡೆಗಳ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿತ್ತು ಮತ್ತು ಅದರ ಮಹತ್ವವನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ವಿಭಾಗದ ಅಧ್ಯಕ್ಷರು, ಪ್ರಾಧ್ಯಾಪಕರು ಮತ್ತು ಅತಿಥಿಗಳು ಗದ್ದೆಗೆ ಆಗಮಿಸಿ ಧೂಪ ನೀಡುವುದರೊಂದಿಗೆ ಹಾಗೂ ತೆಂಗಿನಕಾಯಿಯನ್ನು ಒಡೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುಡಿಸಲು ಮನೆಯ ಬಳಿ ಎಲ್ಲರಿಗೂ ಕಬ್ಬು ರಸವನ್ನು ನೀಡಲಾಯಿತು. ಅತಿಥಿಗಳು ವಿದ್ಯಾರ್ಥಿಗಳ ವಿಭಾಗದಲ್ಲಿ ಮೂಡಿಸಿದ ಗ್ರಾಮೀಣ ವಾತಾವರಣವನ್ನು ವೀಕ್ಷಿಸಿ ವಿದ್ಯಾರ್ಥಿಗಳ ಗ್ರಾಮೀಣ ಪರಿಕಲ್ಪನೆ ಹಾಗೂ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಿಭಾಗದ ಅಧ್ಯಕ್ಷರಾದ ಡಾ.ಸೋಮಣ್ಣ ಹೊಂಗಳ್ಳಿ ವಹಿಸಿದ್ದರು. ಅತಿಥಿಗಳಾಗಿ ಪ್ರಾಧ್ಯಾಪಕರುಗಳಾದ ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಅಭಯಕುಮಾರ್, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ರಾಜಶ್ರೀ ಭಾಗವಹಿಸಿದ್ದರು. ಅವರೆಲ್ಲರನ್ನೂ ಸಂಪ್ರದಾಯದಂತೆ ಎಲೆ ಅಡಿಕೆ ನೀಡಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಶೋಧನಾ ಸಹಾಯಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿಧ್ಯಾರ್ಥಿಗಳು ಕೂಡಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ವಿಭಾಗದಲ್ಲಿ ಮೂಡಿಬಂದ ದೇಸಿ ಹಬ್ಬ ಹಾಗೂ ವಿದ್ಯಾರ್ಥಿಗಳ ಪರಿಶ್ರಮ, ಉತ್ಸಾಹವನ್ನು ಕೊಂಡಾಡಿದರು.

ಬಳಿಕ ದೇಸಿ ಹಬ್ಬದ ತಯಾರಿಗೆ ಮಾಡಿದಂತಹ ಸಿದ್ದತೆಗಳನು, ಅನುಭವಗಳನ್ನು ಎಲ್ಲಾ ವಿದ್ಯಾಥಿಗಳ ಪರವಾಗಿ ವಿದ್ಯಾರ್ಥಿ ಪ್ರತಿನಿಧಿಯಾದ ರವಿಕುಮಾರ ಎಂ.ಹೊಸಮನಿ ಅವರುಹೇಳಿದರು. ಅಲ್ಲದೆ ಕಾರ್ಯಕ್ರಮಕ್ಕೆ ಸಲಹೆ,ಸಹಕಾರವನ್ನು ನೀಡಿದಂತಹ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿ ಸಾಂಪ್ರದಾಯಿಕ ಶೈಲಿಯಲ್ಲಿಯೇ ಬಾಳೆ ಎಲೆಯ ಊಟ ಸವಿದರು. ಹೋಳಿಗೆ, ಪಾಯಸ ಸೇರಿದಂತೆ ಇತರ ಸಾಂಪ್ರದಾಯಿಕ ತಿಂಡಿಗಳ ವ್ಯವಸ್ಥೆಯನ್ನು ಈ ಸಂದರ್ಭದಲ್ಲಿ ಮಾಡಲಾಗಿತ್ತು.

ಒಟ್ಟಿನಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳು ಸಾಂಪ್ರಾದಾಯಿಕ ದಿನವನ್ನು ದೇಸಿ ಹಬ್ಬವಾಗಿ ಆಚರಿಸುವುದರೊಂದಿಗೆ ಕನ್ನಡ ಅಧ್ಯಯನ ವಿಭಾಗದಲ್ಲಿ ಗ್ರಾಮೀಣ ಸಂಸ್ಕೃತಿಯ, ಹಳ್ಳಿಯ ವಾತಾವರಣವನ್ನು ಸೃಷ್ಟಿಸುವುದರೊಂದಿಗೆ ಸಾಂಪ್ರಾದಾಯಿಕ ಉಡುಪು ದಿರಿಸಿನೊಂದಿಗೆ ಸಂಭ್ರಮಿಸಿದರು. ಸಂಭ್ರಮದ ಕ್ಷಣಗಳನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊಬೈಲ್‍ಗಳ ಮೂಲಕ ಸೆಲ್ಫಿ ತೆಗೆದುಕೊಂಡು ಹಿಡಿದಿಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT